ಕೋಲಾರ: ಪ್ರಕೃತಿ ವಿನಾಶದಿಂದ ದೇಶದಲ್ಲಿ ಅನೇಕ ವೈಪರೀತ್ಯಗಳು ಎದುರಾಗುತ್ತಿವೆ. ಮನುಷ್ಯ ಅನೇಕ ಕಷ್ಟಗಳನ್ನು ಅನುಭವಿಸುತ್ತಿದ್ದಾನೆ. ಈ ಹಿನ್ನೆಲೆಯಲ್ಲಿ ಮನುಷ್ಯ ಮಾಡಿರುವ ತಪ್ಪನ್ನು ಮನುಷ್ಯನೇ ಸರಿಪಡಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಎಂ.ಗೊಲ್ಲಹಳ್ಳಿ ಗ್ರಾಮದಲ್ಲಿ ಸಸ್ಯ ಕ್ರಾಂತಿ ನಡೆಯುತ್ತಿದೆ.
ಹೌದು, ಈ ಗ್ರಾಮದ ಒಂದು ಮನೆಯವರು ಕನಿಷ್ಡ 15 ಗಿಡಗಳನ್ನು ನೆಡಲು ಮುಂದಾಗಿದ್ದಾರೆ. ಈ ಗ್ರಾಮಸ್ಥರು ಗ್ರಾಮದಲ್ಲಿ ಸುಮಾರು 2,500 ಗಿಡಗಳನ್ನು ನೆಡಲು ಮುಂದಾಗಿದ್ದು, ಗ್ರಾಮದಲ್ಲಿರುವ ಪ್ರತಿಯೊಬ್ಬರು ಈ ಕಾರ್ಯಕ್ರಮಕ್ಕೆ ಕೈ ಜೊಡಿಸುವ ಮೂಲಕ ಗ್ರಾಮವನ್ನು ಆಕ್ಸಿಜನ್ ರಿಂಗ್ ಮಾಡಲು ಪಣ ತೊಟ್ಟಿದ್ದಾರೆ.
ಉಸಿರಾಡಲು ಬೇಕಾದ ಕನಿಷ್ಠ ಪ್ರಮಾಣದ ಆಮ್ಲಜನಕ ಮನುಷ್ಯನಿಗೆ ಸಿಗದ ಕಾರಣದಿಂದಾಗಿ ಆಕ್ಸಿಜನ್ ಕೊರತೆಯಿಂದ ಕೊರೊನಾದಂತಹ ರೋಗಗಳಿಗೆ ಮನುಷ್ಯ ತುತ್ತಾಗುತ್ತಿದ್ದಾನೆ. ಈ ಹಿನ್ನೆಲೆಯಲ್ಲಿ ಈ ಗ್ರಾಮದ 700 ಜನರು ಒಬ್ಬೊಬ್ಬ ಕನಿಷ್ಠ 5 ಗಿಡಗಳನ್ನು ನೆಡಬೇಕೆಂಬ ಸಂಕಲ್ಪಕ್ಕೆ ಗ್ರಾಮಸ್ಥರು ಬಂದಿದ್ದಾರೆ. ಆಮ್ಲಜನಕವನ್ನು ಯಥೇಚ್ಛವಾಗಿ ನೀಡುವ ಬೇವು, ಅರಳಿಮರ ಸೇರಿದಂತೆ ವಿವಿಧ ರೀತಿಯ ಗಿಡಗಳನ್ನು ಮನೆ ಮತ್ತು ಗ್ರಾಮದ ಸುತ್ತಮುತ್ತ ನೆಡಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಈಗ ನೆಡುವಂತಹ ಈ ಗಿಡಗಳು ಮುಂದಿನ ಪೀಳಿಗೆಗೆಗಾದರೂ ಅನುಕೂಲವಾಗಲಿ. ಅದರ ಜೊತೆಗೆ ಗ್ರಾಮ ಸಂಪೂರ್ಣ ಆಕ್ಸಿಜನ್ ರಿಂಗ್ ಆಗಲಿದೆ. ಇದ್ರಿಂದ ಗ್ರಾಮಸ್ಥರು ಯಾವುದೇ ರೋಗರುಜಿನಗಳಿಗೆ ಒಳಗಾಗದೆ ನೆಮ್ಮದಿಯ ಜೀವನ ಸಾಗಿಸಬಹುದು ಅನ್ನೋದು ಗ್ರಾಮಸ್ಥರ ಮಾತು.
ಒಟ್ಟಾರೆ ಈಗಾಲಾದರೂ ಮರ ಗಿಡಗಳನ್ನು ನೆಡುವ ಮೂಲಕ ಪ್ರಕೃತಿಯನ್ನು ಉಳಿಸಲು ಮುಂದಾಗಿರುವುದು ಸಂತೋಷದ ಸಂಗತಿಯಾಗಿದೆ.