ಕೋಲಾರ : ಏಷ್ಯಾದ ಎರಡನೇ ಅತಿ ದೊಡ್ಡ ಮಾರುಕಟ್ಟೆ ಎಂದೇ ಹೆಸರಾಗಿರುವ ಜಿಲ್ಲೆಯ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡುವುದಕ್ಕೆ ಹಾಗೂ ಕೊಳ್ಳುವುದಕ್ಕೆ ಸಮಯ ನಿಗದಿ ಮಾಡಲಾಗಿದೆ.
ಎಪಿಎಂಸಿ ಮಾರುಕಟ್ಟೆ ಸಮಿತಿ ಹಾಗೂ ಜಿಲ್ಲಾಡಳಿತ ಸಭೆ ನಡೆಸಿ ತೀರ್ಮಾನಿಸಿದ್ದು, ಕೆಲ ನಿರ್ಬಂಧಗಳ ಮೂಲಕ ಬೆಳಗ್ಗೆ 6 ಗಂಟೆಯಿಂದ 9 ಗಂಟೆಯವರೆಗೆ ಮಾತ್ರ ರೈತರು, ಮಾರಾಟಗಾರರು ಹಾಗೂ ಗ್ರಾಹಕರು ಮಾರುಕಟ್ಟೆಯೊಳ ಬರುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.
ಇನ್ನು ಮಾರುಕಟ್ಟೆ ಪ್ರವೇಶ ಮಾಡುವ ಗ್ರಾಹಕರು, ವ್ಯಾಪಾರಸ್ಥರು ಹಾಗೂ ಮಾರಾಟಗಾರರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಇಲ್ಲವಾದಲ್ಲಿ ಮಾರುಕಟ್ಟೆ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ತೀರ್ಮಾನಿಸಲಾಗಿದೆ.
ಇನ್ನು ತರಕಾರಿ ಮಾರಾಟ ಮಾಡಲು ಮಾರುಕಟ್ಟೆಯಲ್ಲಿ ಎಲ್ಲಾ ತರಕಾರಿಗಳು ಸಿಗುವ ಹಾಗೆ ಸುಮಾರು 40 ಮಳಿಗೆಗಳನ್ನು ತೆರೆಯಲಾಗಿದ್ದು, ಒಮ್ಮೆಗೆ 50 ಜನರನ್ನು ಒಳ ಹೋಗಲು ಅವಕಾಶ ನೀಡಲಾಗಿದೆ. ಅಲ್ಲದೆ ಈ 50 ಜನರು ತರಕಾರಿ ಕೊಂಡು ಹೊರಬಂದ ನಂತರ ಮತ್ತೆ 50 ಜನರು ಮಾರುಕಟ್ಟೆ ಪ್ರವೇಶ ಮಾಡಬೇಕಿದೆ.
ಇನ್ನು ಗ್ರಾಹಕರು ತಮ್ಮ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ತಿಳಿಸಲಾಗಿದ್ದು, ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.