ಕೋಲಾರ : ನ್ಯಾಯಾಲಯದ ಆದೇಶದಂತೆ ಇಂದು ಕೆಜಿಎಫ್-2 ನ ಚಿತ್ರೀಕರಣ ತಂಡ ಸೈನೆಡ್ ಗುಡ್ಡಗಳ ಮೇಲೆ ಸಸಿಗಳನ್ನ ನೆಡುವುದರ ಮೂಲಕ ಕೋರ್ಟ್ ಆದೇಶವನ್ನ ಪಾಲಿಸಿದ್ದಾರೆ.
ದಕ್ಷಿಣ ಭಾರತದ ಬಹುನಿರೀಕ್ಷಿತ ಚಿತ್ರವಾಗಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 ಚಿತ್ರೀಕರಣವನ್ನ ಕೋಲಾರ ಜಿಲ್ಲೆಯ ಕೆಜಿಎಫ್ ಬಳೀ ಇರುವಂತಹ ಸೈನೆಡ್ ಗುಡ್ಡಗಳ ಮೇಲೆ ಸೆಟ್‌ನ್ನ ಹಾಕಿ ಚಿತ್ರೀಕರಣ ಮಾಡಲಾಗುತ್ತಿದೆ. ಈ ಹಿನ್ನೆಲೆ ಅಲ್ಲಿನ ಸ್ಥಳೀಯರೊಬ್ಬರು ಶೂಟಿಂಗ್ ನಿಂದ ಹಲವು ಗಿಡಗಳ ನಾಶ ಸೇರಿದಂತೆ ಗುಡ್ಡದ ಸ್ವರೂಪವನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಿ ಕೋರ್ಟ್ ಮೊರೆ ಹೋಗಿದ್ರು. ಗುಡ್ಡದ ದೂಳು ವಿಷಕಾರಿ ಆಗಿರೋದ್ರಿಂದ ದೂರನ್ನು ಗಂಭೀರವಾಗಿ ಪರಿಗಣಿಸಿದ ಕೆಜಿಎಫ್ ನ ಜೆಎಂಎಫ್ ಸಿ ಕೋರ್ಟ್ ಶೂಟಿಂಗ್‌ಗೆ ತಡೆಯಾಜ್ಞೆ ನೀಡಿತ್ತು.
ಅಲ್ಲದೆ, ಈ ಹಿಂದೆ ಇದೇ ಕೋರ್ಟ್ನ ನ್ಯಾಯಾಧೀಶರು ಗುಡ್ಡದ ಮೇಲೆ ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಿದ್ದು, ಯಾವುದೇ ಕಾರಣಕ್ಕೂ ಧೂಳು ಬರಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ರು. ಇನ್ನು ಸೈನೆಡ್ ಗುಡ್ಡಗಳ ಮೇಲೆ ದಿನಕ್ಕೆ ನೂರಾರು ಟ್ಯಾಂಕರ್ ನೀರನ್ನು ಬಳಸುತ್ತೇವೆ, ಯಾವುದೇ ಕಾರಣಕ್ಕೂ ಧೂಳು ಏಳಲು ಬಿಟ್ಟಿಲ್ಲ, ಅಲ್ಲದೇ ಈಗಾಗಲೇ ಹಾಳಾಗಿರೋ ಸಸಿಗಳನ್ನು ಪುನರ್ ನಾಟಿ ಮಾಡುತ್ತೇವೆ ಎಂದು ಚಿತ್ರತಂಡ ವಾದ ಮಾಡಿತ್ತು.
ನ್ಯಾಯಾಲಯ ಶೂಟಿಂಗ್‌ನಿಂದ ಹಾಳಾಗಿರುವ ಸ್ಥಳದಲ್ಲಿ ಗಿಡ ನೆಡುವಂತೆ ಆದೇಶ ಮಾಡಿ ಚಿತ್ರೀಕರಣ ಕ್ಕೆ ಅನುವು ಮಾಡಿಕೊಟ್ಟಿತ್ತು. ಈ ಹಿನ್ನೆಲೆ ಚಿತ್ರ ತಂಡ ಸಸಿಗಳನ್ನ ನೆಡುತ್ತಿದ್ದು, ಮುಂದಿನ ಭಾನುವಾರದಿಂದ ಒಂಭತ್ತು ದಿನಗಳ ಕಾಲ ಚಿತ್ರೀಕರಣ ನಡೆಸುವುದಾಗಿ ತಿಳಿಸಿದೆ.