ಕೋಲಾರ: ಆ ಪ್ರಾಣಿ ನಿಯತ್ತಿಗೆ ಇನ್ನೊಂದು ಹೆಸರು ಪಡೆದಿರುವ ಪ್ರಾಣಿ. ಸ್ವಾಮಿ ನಿಷ್ಠೆಗೆ ಹೆಸರುವಾಸಿ. ಅದೆಷ್ಟೋ ಜನರಿಗೆ ಪ್ರೀತಿಯ ಪಪ್ಪಿ, ಸ್ನೇಹಿತನಷ್ಟೇ ಅಲ್ಲದೆ, ಮನೆಯ ಮುದ್ದಿನ ಪ್ರಾಣಿಯೂ ಆಗಿದೆ ಈ ಶ್ವಾನ. ಮಕ್ಕಳಿಲ್ಲದ ಈ ದಂಪತಿಗೆ ಅದು ಮಗುವಾಗಿ ಕಳೆದ ಐದು ವರ್ಷಗಳಿಂದ ಆ ಕುಟುಂಬದ ಪ್ರೀತಿ ಗಳಿಸಿ ಅದ್ಧೂರಿ ಜನ್ಮದಿನವನ್ನೂ ಆಚರಿಸಿಕೊಂಡಿದೆ.
ನಗರದ ಬ್ರಾಹ್ಮಣರ ಬೀದಿಯಲ್ಲಿರುವ ವೆಂಕಟೇಶ್ ಹಾಗೂ ಅಮರಮ್ಮ ದಂಪತಿ ತಾವು ಸಾಕಿ ಬೆಳೆಸಿದ 'ರಾಮು'ನ 5ನೇ ವರ್ಷದ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದ್ದಾರೆ. ಮಕ್ಕಳಿಲ್ಲದ ಈ ದಂಪತಿ ತಾವು ಮಗನಂತೆ ಸಾಕಿದ ನಾಯಿ ರಾಮುಗೆ ಹುಟ್ಟುಹಬ್ಬ ಆಚರಿಸಿದ್ದಾರೆ. ಹತ್ತಾರು ಜನರ ಸಮ್ಮುಖದಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ನಾಯಿಗೆ ಹೊಸ ಬಟ್ಟೆ ಹಾಕಿ ಕೇಕ್ ಕತ್ತರಿಸಿ, ಒಂದಷ್ಟು ಜನರಿಗೆ ಸಿಹಿ ಹಂಚಿದರು.
ನಗರಸಭೆ ವಾಲ್ಮ್ಯಾನ್ ಆಗಿರುವ ವೆಂಕಟೇಶ್ ಹಾಗೂ ಅಮರಮ್ಮ ದಂಪತಿಗೆ ಮಕ್ಕಳಿಲ್ಲ. ಹಾಗಾಗಿ ಈ ನಾಯಿ ರಾಮುನನ್ನೇ ತಮ್ಮ ಮಗನಂತೆ ನೋಡಿಕೊಳ್ಳುತ್ತಿರುವ ಇವರಿಗೆ ,ರಾಮುನನ್ನ ಯಾರೂ ಕೂಡ ನಾಯಿ ಎನ್ನುವಂತ್ತಿಲ್ಲ. 5 ವರ್ಷದ ಹಿಂದೆ ನಾಯಿ ಮರಿ ಕಣ್ಣು ಬಿಡುವ ಮುನ್ನವೇ ಮನೆಗೆ ತಂದು ತಮ್ಮ ಮಗನಂತೆ ಪೋಷಣೆ ಮಾಡುತ್ತಿದ್ದಾರೆ. ಶ್ವಾನಕ್ಕೆ ಹೊಸ ಬಟ್ಟೆ ಹಾಕಿ, ಕೇಕ್ ಕತ್ತರಿಸಿ, ಚಿಕನ್ ಬಿರಿಯಾನಿ ಹಾಗೂ ಫಿಶ್ ಕಬಾಬ್ ಮಾಡಿ ಅದ್ಧೂರಿಯಾಗಿ ಬರ್ತಡೇ ಆಚರಿಸಿದರು. ಹುಟ್ಟುಹಬ್ಬಕ್ಕೆ ಬಂದ ಗಣ್ಯರಂತೂ ಈ ದಂಪತಿಯ ಶ್ವಾನ ಪ್ರೀತಿಗೆ ಮನಸೋತರು. ಎಲ್ಲರೂ ರಾಮುಗೆ ಜನ್ಮದಿನದಂದು ಶುಭ ಹಾರೈಸಿದರು.