ಕೋಲಾರ: ಆ ಶಿಕ್ಷಕ ನಿತ್ಯ ದೂರದ ಶಾಲೆಗೆ ಹೋಗಿ ಮಕ್ಕಳಿಗೆ ಪಾಠ ಹೇಳಿಕೊಟ್ಟು ಅವರ ಜೀವನ ಉಜ್ವಲವಾಗಲಿ ಎಂದು ಶ್ರಮ ಪಡುತ್ತಿದ್ದರು. ಆದ್ರೆ ಮಹಾಮಾರಿ ಕೊರೊನಾ ಅವರ ಜೀವನವನ್ನೇ ಬಲಿ ತೆಗೆದುಕೊಂಡಿತು. ಕುಟುಂಬದ ಆಧಾರಸ್ತಂಭವನ್ನು ಕಳೆದುಕೊಂಡ ಕುಟುಂಬಸ್ಥರು ಇದೀಗ ಕಣ್ಣೀರು ಹರಿಸುತ್ತಿದ್ದಾರೆ.
ಒಂದೆಡೆ ತನ್ನ ಪತಿಯ ನೆನಪಿನ ಪತ್ರಗಳನ್ನು, ಪೋಟೋಗಳನ್ನು, ದಾಖಲೆಗಳನ್ನು ನೋಡುತ್ತಾ ಕಣ್ಣೀರಿಡುತ್ತಿರುವ ಪತ್ನಿ. ಇನ್ನೊಂದೆಡೆ, ತಂದೆ ಇಲ್ಲದ ಬದುಕನ್ನು ಊಹಿಸಿಕೊಳ್ಳಲಾಗದೆ ಗರ ಬಡಿದಂತೆ ಕುಳಿತಿರುವ ಮಗ. ಇದು ಶಿಕ್ಷಕನ ಕುಟುಂಬದ ಈಗಿನ ಪರಿಸ್ಥಿತಿ.
ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕು ಹನುಮನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶ್ರೀನಿವಾಸ್ ಅವರು ಹಿಂದಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಕೊರೊನಾ ಹಿನ್ನೆಲೆ ಇವರು ವಿದ್ಯಾಗಮ ಯೋಜನೆಯಡಿ ಮಕ್ಕಳಿಗೆ ಶಿಕ್ಷಣ ನೀಡಲು ನಿತ್ಯ ಶಾಲೆಗಳಿಗೆ ಹೋಗಿ ಬರುತ್ತಿದ್ದರು. ಆಗಸ್ಟ್ ತಿಂಗಳ ಆರಂಭದಲ್ಲಿ ಜ್ವರದಿಂದ ಕೆಲವು ದಿನಗಳ ಕಾಲ ಮನೆಯಲ್ಲೇ ಉಳಿದುಕೊಂಡರು. ಸಕ್ಕರೆ ಕಾಯಿಲೆ ಹಾಗೂ ಅಧಿಕ ರಕ್ತದೊತ್ತಡ ಇದ್ದ ಕಾರಣ ಜ್ವರ ಹೆಚ್ಚಾಗಿ ಅವರನ್ನು ಆ.10 ರಂದು ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ.11 ರಂದು ಕೋವಿಡ್ ಪರೀಕ್ಷೆ ಮಾಡಲಾಗಿದ್ದು, ಅವರಿಗೆ ಆ.13 ರಂದು ಅವರಿಗೆ ಕೋವಿಡ್ ಇರುವುದು ದೃಢಪಟ್ಟಿತ್ತು. ಇದರಿಂದ ಆತಂಕಗೊಂಡು ಆ.14 ರಂದು ಜಾಲಪ್ಪ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದರು.
ಹೀಗೆ ಯಾರೂ ಊಹಿಸಲಾರದ ರೀತಿಯಲ್ಲಿ ಬಂದೆರಗಿದ ಕೊರೊನಾಗೆ ಶಿಕ್ಷಕ ಬಲಿಯಾಗಿದ್ದು, ಕುಟುಂಬ ಆತಂಕದಲ್ಲಿ ದಿನದೂಡುತ್ತಿದೆ.
ಶ್ರೀನಿವಾಸ್ ಅವರಿಗೆ ಇಬ್ಬರು ಮಕ್ಕಳು. ಮಗಳು ಭವ್ಯ, ಮಗ ಪುನಿತ್ ಇದ್ದಾರೆ. ಮಗಳಿಗೆ ಮೂರು ತಿಂಗಳ ಹಿಂದಷ್ಟೇ ಮದುವೆ ಮಾಡಲಾಗಿತ್ತು. ಮಗ ಈ ವರ್ಷ ದ್ವಿತೀಯ ಪಿಯುಸಿ ಓದುತ್ತಿದ್ದಾನೆ. ಇಂಥ ಪರಿಸ್ಥಿತಿಯಲ್ಲಿ ಇಡೀ ಕುಟುಂಬದ ಆಧಾರ ಸ್ಥಂಭವಾಗಿದ್ದ ಶ್ರೀನಿವಾಸ್ರವರ ಅಕಾಲಿಕ ಮರಣ ಕುಟುಂಬಕ್ಕೆ ಆಘಾತ ನೀಡಿದೆ.