ಕೋಲಾರ: ಹೋಂ ಕ್ವಾರಂಟೈನ್ ಮಾಡಿದ್ದಕ್ಕೆ ಆಕ್ರೋಶಗೊಂಡ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಮಾಲೂರು ತಾಲೂಕಿನ ಸಂತೇಹಳ್ಳಿ ಗ್ರಾಮದ ಈ ವ್ಯಕ್ತಿ ಪೆಟ್ರೋಲ್ ಬಾಟಲ್ ಹಿಡಿದುಕೊಂಡು ಆತ್ಮಹತ್ಯೆಗೆ ಶರಣಾಗುವುದಾಗಿ ಹೇಳಿದ್ದಾನೆ.
ಬೆಂಗಳೂರಿನಿಂದ ಸಂಬಂಧಿಕರು ಈತನ ಮನೆಗೆ ಬಂದಿದ್ದರು. ಬಳಿಕ ಕೆಲವರು ಆಶಾ ಕಾರ್ಯಕರ್ತರಿಗೆ ತಿಳಿಸಿ ಕ್ವಾರಂಟೈನ್ ಮಾಡಲು ಸೂಚಿಸಿದ್ದರು. ಆಗ ಈ ವ್ಯಕ್ತಿ ಸೇರಿದಂತೆ ಈತನ ಕುಟುಂಬಸ್ಥರ ಫೋಟೊ ವೈರಲ್ ಆಗಿದೆ. ಇವರಿಗೆ ಕೆಲವು ಕಿಡಿಗೇಡಿಗಳು ಶಂಕಿತರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಹೀಗಾಗಿ ತಮ್ಮನ್ನು ಅನಾವಶ್ಯಕವಾಗಿ ಕ್ವಾರಂಟೈನ್ ಮಾಡಿದ್ದಾರೆಂದು ಆರೋಪಿಸಿರುವ ಈ ಕುಟುಂಬ ಸದಸ್ಯರು, ಗ್ರಾಮ ಪಂಚಾಯತ್ ಕಚೇರಿಗೆ ಬಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ಕುಟುಂಬದ ವ್ಯಕ್ತಿ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಮಾಲೂರು ಶಾಸಕ ಕೆ.ವೈ. ನಂಜೇಗೌಡ, ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಆಗಮಿಸಿ ಇವರ ಕುಟುಂಬಸ್ಥರ ಮನವೊಲಿಸಿದ್ದಾರೆ.