ಕೋಲಾರ: ಖಾಸಗಿ ಬಸ್ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ಗಳ ಓವರ್ ಟೇಕ್ ಪೈಪೋಟಿಗೆ ವಿದ್ಯಾರ್ಥಿನಿಯೊಬ್ಬಳು ಬಲಿಯಾಗಿದ್ದಾಳೆ.
ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ಈ ಘಟನೆ ಜರುಗಿದ್ದು, ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ದರ್ಜೆ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ತಾಲೂಕಿನ ಲಕ್ಕೂರು ಹೋಬಳಿಯ ತಾಳಕುಂಟೆ ಗ್ರಾಮದ ದೀಪಿಕಾ (16) ಮೃತೆ. ಘಟನೆಯನ್ನ ಖಂಡಿಸಿ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಘಟನೆ ವಿವರ: ಕಾಲೇಜು ಮುಗಿಸಿಕೊಂಡು ಬಸ್ ನಿಲ್ದಾಣಕ್ಕೆ ವಿದ್ಯಾರ್ಥಿನಿ ಬರುತ್ತಿದ್ದಳು. ಮಾಲೂರು ಪಟ್ಟಣದಲ್ಲಿ ಖಾಸಗಿ ಹಾಗೂ ಸರ್ಕಾರಿ ಸಾರಿಗೆ ಬಸ್ಗೆ ಒಂದೇ ನಿಲ್ದಾಣ ಇರುವ ಕಾರಣ ಪರಸ್ಪರ ಓವರ್ಟೇಕ್ ಮಾಡಲು ಚಾಲಕರು ಯತ್ನಿಸಿದ್ದಾರೆ. ಈ ವೇಳೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿನಿ ಕೆಳಕ್ಕೆ ಬಿದ್ದಿದ್ದು, ತಲೆ ಭಾಗ ಕಲ್ಲಿಗೆ ತಾಕಿದ್ದರಿಂದ ಮೃತಪಟ್ಟಿದ್ದಾಳೆ ಎನ್ನಲಾಗಿದೆ.
ಮಾಲೂರು ಪಟ್ಟಣದ ಮಾರಿಕಾಂಬ ವೃತ್ತದ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಬಸ್ ಚಾಲಕರ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ಮಾಲೂರಿನಲ್ಲಿ ಖಾಸಗಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಒಂದೇ ಆಗಿರುವ ಪರಿಣಾಮ ಖಾಸಗಿ ಬಸ್ ಚಾಲಕರ ವರ್ತನೆಗೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಬಸ್ ನಿಲ್ದಾಣದ ಅವ್ಯವಸ್ಥೆ ಹಾಗೂ ಚಾಲಕರ ನಿರ್ಲಕ್ಷ್ಯದಿಂದಾಗಿ ಘಟನೆ ಜರುಗಿದ್ದು, ವಿದ್ಯಾರ್ಥಿನಿ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯ ಮಾಡಿದ್ದಾರೆ. ಇನ್ನು ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.