ಕೋಲಾರ: ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕೋಡಗುರ್ಕಿ ಗ್ರಾಮದ ಮಂಜುನಾಥ 17 ವರ್ಷ ದೇಶಕ್ಕಾಗಿ ದುಡಿದು, ಸೇನೆಯಿಂದ ನಿವೃತ್ತಿ ಪಡೆದು ಮನೆಗೆ ಮರಳಿದ್ದರು. ಆದ್ರೀಗ ದೇಶದ ಹೆಮ್ಮೆಯ ಸೈನಿಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಮಂಜುನಾಥ ಸೇನೆಯಿಂದ ನಿವೃತ್ತಿ ಪಡೆದು ಕೋಲಾರಕ್ಕೆ ಆಗಮಿಸಿ, ತಮ್ಮ ಪತ್ನಿ ಹಾಗೂ ಮಕ್ಕಳೊಂದಿಗೆ ಸಹ ಜೀವನ ನಡೆಸಲು ನೂರಾರು ಕನಸುಗಳನ್ನು ಹೊತ್ತು ಬಂದಿದ್ದರು. ಆದ್ರೆ ನಿನ್ನೆ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. ಅವರ ಸಾವಿಗೆ ಇಡೀ ಜಿಲ್ಲೆ ಕಂಬನಿ ಮಿಡಿದಿದೆ. ಫೆ. 1ರಂದು ನಿವೃತ್ತಿಯಾಗಿ ಮನೆಗೆ ಬಂದ ಯೋಧನ ಅಕಾಲಿಕ ಸಾವು ನಿಜಕ್ಕೂ ಮನಕಲಕುವಂತಿದೆ. ಪತ್ನಿ ಅಶ್ವಿನಿ ಗಂಡನಿಗಾಗಿ 6 ತಿಂಗಳಿಂದ ಕಾದಿದ್ರು. ಮಕ್ಕಳು ಕೂಡ ತಂದೆಯ ಆಗಮನಕ್ಕಾಗಿ ದಿನಗಳನ್ನು ಎಣಿಸುತ್ತಿದ್ರು. ದೇಶ ಸೇವೆ ಮಾಡಿ ವಾಪಸ್ ಬಂದ ಪತಿ ಹೀಗೆ ತನ್ನ ಮಡಿಲಲ್ಲೇ ಪ್ರಾಣ ಬಿಟ್ಟಿದ್ದು ನೋಡಿ ನನಗೆ ತುಂಬಾ ನೋವಾಗುತ್ತಿದೆ ಎನ್ನುತ್ತಾರೆ ಪತ್ನಿ ಅಶ್ವಿನಿ.
ನಿವೃತ್ತಿ ಪಡೆದ ಬಳಿಕ ಪತ್ನಿಯ ಇಚ್ಛೆಯಂತೆ ದೊಡ್ಡ ಮನೆ ಕಟ್ಟುವ ಆಲೋಚನೆಯನ್ನು ಮಂಜುನಾಥ ಮಾಡಿದ್ದರು. ಗಡಿಯಿಂದ ಬಂದ ಬಳಿಕ ತನ್ನ ಪತ್ನಿಯೊಂದಿಗೆ ಹಲವು ವಿಚಾರಗಳ ಬಗ್ಗೆ ಮಾತನಾಡಿರುವ ಯೋಧ, ತಾನು ಹಾಗೂ ತನ್ನ ಪುಟ್ಟ ಸಂಸಾರದ ಬಗ್ಗೆ ನೂರಾರು ಕನಸುಗಳನ್ನು ಕಟ್ಟಿಕೊಂಡಿದ್ದ. ಆದ್ರೆ ಜವರಾಯ ಕುಟುಂಬದ ಸದಸ್ಯರ ಜೊತೆ ಒಂದು ದಿನ ಕಳೆಯುವ ಮುನ್ನವೇ ಎಲ್ಲಾ ಕನಸುಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾನೆ. ಮಗನನ್ನ ಕಳೆದುಕೊಂಡ ತಾಯಿ ರತ್ನಮ್ಮ, ಪತ್ನಿ ಅಶ್ವಿನಿ ಹಾಗೂ ಇಬ್ಬರು ಮಕ್ಕಳ ಆಕ್ರಂದನ ಮುಗಿಲು ಮುಟ್ಟಿತ್ತು.
ಓದಿ: ದೇವರ ದಯೆ ಕರುನಾಡಿನಲ್ಲಿ ನೆಮ್ಮದಿಯಿಂದಿದ್ದೇವೆ.. ಮಹಾ ಸಿಎಂ ಠಾಕ್ರೆಗೆ ಮರಾಠಿಗರಿಂದ್ಲೇ ಮುಖಭಂಗ..
ಸ್ವಗ್ರಾಮ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕೋಡಗುರ್ಕಿ ಗ್ರಾಮದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ವೇಳೆ ಕೋಲಾರ ಜಿಲ್ಲಾ ಮಾಜಿ ಯೋಧರ ಟ್ರಸ್ಟ್‌ನ ಹತ್ತಾರು ಸದಸ್ಯರು ಮೃತ ಯೋಧನ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದ್ರು. ತೆರೆದ ವಾಹನದಲ್ಲಿ ಗ್ರಾಮದಲ್ಲಿ ಮೆರವಣಿಗೆ ಮಾಡಿ, ನಂತರ ಬೂದಿಕೋಟೆ ಬಳಿ ಇರುವ ಅವರದೇ ಜಮೀನಿನಲ್ಲಿ ಯೋಧನ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.