ಕೋಲಾರ : ಎರಡು ಗ್ಯಾಂಗ್ಗಳು ಹೊಡದಾಡಿಕೊಂಡಿರುವ ಘಟನೆ ನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಒಂದು ಏರಿಯಾದ ಎರಡು ಗ್ಯಾಂಗ್ಗಳ ನಡುವೆ ಆಗಾಗ ನಡೆಯುತ್ತಿದ್ದ ಗಲಾಟೆ ಇವತ್ತು ಕೂಡಾ ಬೈಕ್ಗಳಲ್ಲಿ ಎದುರುಬದುರಾದಾಗ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದೆ. ಕ್ಷಣಾರ್ಧದಲ್ಲೇ ರಸ್ತೆಯಲ್ಲೇ ಮಾರಾಮಾರಿ ನಡೆದಿದ್ದು, ಹಲವರಿಗೆ ಗಾಯಗಳಾಗಿದ್ದವು. ಗಾಯಳುಗಳನ್ನು ನಗರದ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು.
ನಗರದ ಕಠಾರಿಪಾಳ್ಯದ ಗಂಗಾಧರ್ ಹಾಗೂ ಅಪರಂಜಿ ನಾರಾಯಣಸ್ವಾಮಿ ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಕಠಾರಿಪಾಳ್ಯದ ಪಂಚಣ್ಣನ ಅಂಗಡಿ ಸರ್ಕಲ್ ಬಳಿ ಗ್ಯಾಂಗ್ ವಾರ್ ನಡೆದಿತ್ತು. ಗಂಗಾಧರ್ ಗ್ಯಾಂಗ್ನ ಬಾಲು ಹಾಗೂ ಅಮರ್ ಮತ್ತು ನಾರಾಯಣಸ್ವಾಮಿ ಮಕ್ಕಳಾದ ದಿಲೀಪ್ ಹಾಗೂ ರಾಜೇಶ್ ಇಂದು ಮಧ್ಯಾಹ್ನ ಒಂದೂವರೆ ಗಂಟೆ ಸುಮಾರಿಗೆ ಬೈಕ್ನಲ್ಲಿ ಎದುರಾಗಿದ್ದಾರೆ.
ಈ ವೇಳೆ ಬೈಕ್ಗೆ ಬೈಕ್ ಟಚ್ ಆಗಿದೆ, ಅದೇ ಕಾರಣ ಇಟ್ಟುಕೊಂಡು ಎರಡೂ ಗುಂಪುಗಳ ನಡುವೆ ನಡು ರಸ್ತೆಯ್ಲಲೇ ಮಾರಾಮರಿ ನಡೆದಿದೆ. ನಂತರ ಎರಡೂ ಗುಂಪಿನ ಐದು ಜನರಿಗೆ ತಲೆ ಹಾಗೂ ಕೈಗೆ ಗಾಯಗಳಾಗಿವೆ. ನಂತರ ಅವರನ್ನ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು. ಆಸ್ಪತ್ರೆಯಲ್ಲೂ ಎರಡೂ ಗ್ಯಾಂಗ್ನವರು ಎದುರುಬದುರಾದಾಗ ಮಾತಿಗೆ ಮಾತು ಬೆಳೆದಿದೆ. ಈ ಪರಿಣಾಮ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್ನಲ್ಲಿ ಮತ್ತೆ ಹೊಡೆದಾಟ ಶುರುವಾಗಿದೆ.
ಕೈ ಬದಲು ಟೇಬಲ್ ಗ್ಲೂಕೋಸ್ ಸ್ಟ್ಯಾಂಡ್ಗಳು ಮಾತನಾಡಿದವು
ಆಸ್ಪತ್ರೆಯಲ್ಲಿದ್ದ ಚೇರು ಟೇಬಲ್ಗಳು, ಗ್ಲೂಕೋಸ್ ಸ್ಟಾಂಡ್ ಗಳಲ್ಲಿ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಅಲ್ಲಿದ್ದ ಸಿಬ್ಬಂದಿಗಳು ಬೆಚ್ಚಿಬಿದ್ದಿದ್ದಾರೆ. ನಂತರ ಅಲ್ಲೇ ಇದ್ದ ಪೊಲೀಸ್ ಹಾಗೂ ಸೆಕ್ಯೂರಿಟಿ ಸಿಬ್ಬಂದಿ ಆಸ್ಪತ್ರೆಗೆ ಧಾವಿಸಿ ಬಂದು ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ಈ ಹಿಂದೆಯೂ ನಡೆದಿತ್ತು ಮಾರಾಮಾರಿ
ಅಷ್ಟಕ್ಕೂ ಗಂಗಾಧರ್ ಹಾಗೂ ನಾರಾಯಣಸ್ವಾಮಿ ಗುಂಪಿನ ನಡುವೆ ಕಳೆದ ಎರಡು ತಿಂಗಳ ಹಿಂದೆಯೂ ಗಲಾಟೆ ನಡೆದಿತ್ತು. ಅದು ಅಂದಿನಿಂದಲೂ ಬೂದಿ ಮುಚ್ಚಿದ ಕೆಂಡದಂತಿತ್ತು. ಆ ಗಲಾಟೆಯಾದ ನಂತರ ಎರಡು ಗ್ಯಾಂಗ್ನವರ ಎದುರು ಬದುರಾದಾಗಿರಲಿಲ್ಲ. ಆದರೆ ಇಂದು ಅನಿರೀಕ್ಷಿತವಾಗಿ ಎದುರು ಬದುರಾಗಿದ್ದಾರೆ, ಅಷ್ಟೇ ಅಲ್ಲದೇ ಇಬ್ಬರ ಬೈಕ್ಗಳು ಒಂದಕ್ಕೊಂದು ತಾಕಿವೆ, ಅದೇ ಕಾರಣ ಎರಡು ಗುಂಪುಗಳ ನಡುವೆ ಜಗಳವಾಗಿದೆ.
ಸದ್ಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಕೋಲಾರ ನಗರ ಠಾಣಾ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಅಲ್ಲದೇ ಮುಂಜಾಗ್ರತಾ ಕ್ರಮವಾಗಿ ಕಠಾರಿಪಾಳ್ಯದಲ್ಲಿ ಪೊಲೀಸ್ ಬಂದೋಬಸ್ತ್ ಹಾಕಿದ್ದಾರೆ. ಇನ್ನು ಆಸ್ಪತ್ರೆಯಲ್ಲಿ ನಡೆದ ಗಲಾಟೆ ವೇಳೆ ಆಸ್ಪತ್ರೆಯ ಚೇರು ಟೇಬಲ್ಗಳಿಗೆ ಹಾನಿಯಾಗಿದ್ದು, ಈ ಸಂಬಂಧ ಜಿಲ್ಲಾ ಶಸ್ತ್ರಚಿಕಿತ್ಸಕ ರವಿಕುಮಾರ್ ನಗರ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ.