ಕೋಲಾರ: ಕಾಂಗ್ರೆಸ್ ಹಾಗೂ ಬಿಜೆಪಿಗೆ ಪ್ರತಿಷ್ಠೆಯಾಗಿದ್ದ ಮಾಲೂರು ಪುರಸಭೆ ಅಧ್ಯಕ್ಷ ಸ್ಥಾನದ ಚುನಾವಣೆ ಮತ ಎಣಿಕೆ ವೇಳೆ ಕಾರ್ಯಕರ್ತರ ಮಧ್ಯೆ ಗೊಂದಲ ಸೃಷ್ಟಿಯಾಗಿತ್ತು.
ಕಾಂಗ್ರೆಸ್ ಹಾಗೂ ಬಿಜೆಪಿಗೆ ಪ್ರತಿಷ್ಠೆಯಾಗಿರುವ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯ ಮತ ಎಣಿಕೆ ವೇಳೆ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದೆ. ಬಿಜೆಪಿ ಸದಸ್ಯರ ಕಾರು ಮತಗಟ್ಟೆ ಬಳಿ ಬರುತ್ತಿದ್ದಂತೆಯೇ ಗಲಾಟೆ ಆರಂಭವಾಗಿತ್ತು. ಪುರಸಭೆಗೆ ಆಗಮಿಸಿದ ಬಿಜೆಪಿ ಸದಸ್ಯರಿದ್ದ ಕಾರನ್ನು ಕಾಂಗ್ರೆಸ್ ಮುಖಂಡರು ತಡೆದರು. ನಂತರ ಶಾಸಕರ ಕಾರು ಹೊರಗಿವೆ. ಹೀಗಿರುವಾಗ ಪುರಸಭಾ ಸದಸ್ಯರ ಕಾರನ್ನು ಹೇಗೆ ಬಿಡುತ್ತಿದ್ದೀರಿ ಎಂದು ತಗಾದೆ ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾಪಟಿ ಉಂಟಾದ ಪರಿಣಾಮ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಪುರಸಭಾ ಸದಸ್ಯರೊಬ್ಬರ ಕಾರು ಒಳಗಡೆ ಬಿಡುವ ವಿಚಾರದಲ್ಲಿ ಉಂಟಾದ ವಾಗ್ವಾದ ತಾರಕಕ್ಕೇರಿತ್ತು. ತಳ್ಳಾಟ-ನೂಕಾಟದಿಂದ ಬಿಜೆಪಿ ಸದಸ್ಯರು ಬರುತ್ತಿದ್ದ ಕಾರಿನ ಗಾಜು ಒಡೆದ ಪರಿಣಾಮ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಮಾಲೂರು ಪುರಸಭೆ ಬಲಾಬಲ ನೋಡೋದಾದ್ರೆ ಕಾಂಗ್ರೆಸ್ 11, ಬಿಜೆಪಿ 10, ಪಕ್ಷೇತರ 5, ಜೆಡಿಎಸ್ 1 ಹಾಗೂ ನಾಮ ನಿರ್ದೇಶಿತ ಐವರು ಸದಸ್ಯರನ್ನು ಒಳಗೊಂಡಿದೆ. ಶಾಸಕ ನಂಜೇಗೌಡ ಮತ ಸೇರಿ ಕಾಂಗ್ರೆಸ್‌ಗೆ 16 ಮತಗಳಿದ್ದರೆ, ಸಂಸದ ಮುನಿಸ್ವಾಮಿ ಮತ್ತು ನಾಮ ನಿರ್ದೇಶಿತರ ಬೆಂಬಲದೊಂದಿಗೆ ಬಿಜೆಪಿಗೆ 17 ಸ್ಥಾನ ಇದೆ. ಆದರೆ ನಾಮಿನಿ ಸದಸ್ಯರಿಗೆ ಮತ ನೀಡಲು ಹೈಕೋರ್ಟ್ ಅವಕಾಶ ನೀಡಿದ್ದು, ಪರಿಣಾಮ ಗೊಂದಲ ಏರ್ಪಟ್ಟಿತ್ತು. ಹಾಗಾಗಿ ಫಲಿತಾಂಶವನ್ನು ಪ್ರಕಟಿಸದಂತೆ ಚುನಾವಣಾಧಿಕಾರಿಗಳಿಗೆ ಹೈಕೋರ್ಟ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಮಾಲೂರು ತಹಶೀಲ್ದಾರ್ ರಮೇಶ್ ಕೋರ್ಟಿನ ಆದೇಶದ ಮೇರೆಗೆ ಫಲಿತಾಂಶ ತಡೆಹಿಡಿದರು.
ಈ ವೇಳೆ ಬಿಜೆಪಿ ಮುಖಂಡರು ಚುನಾವಣಾಧಿಕಾರಿ ಕ್ರಮವನ್ನು ಖಂಡಿಸಿ ಪುರಸಭೆ ಹಾಗೂ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಫಲಿತಾಂಶ ಪ್ರಕಟಣೆ ಮಾಡುವಂತೆ ಒತ್ತಾಯಿಸಿದರು. ಜಿಲ್ಲಾಧಿಕಾರಿಗಳ ಸಲಹೆ ಮೇರೆಗೆ ಕೊನೆಗೆ ಬಿಜೆಪಿ ಅಭ್ಯರ್ಥಿ ಅನಿತಾ ನಾಗರಾಜ್ ಜಯಭೇರಿ ಎಂದು ತಹಶೀಲ್ದಾರ್ ಘೋಷಣೆ ಮಾಡಿದರು. ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಮುಖಂಡರು ತಹಶೀಲ್ದಾರ್ಗೆ ಘೇರಾವ್ ಹಾಕಿ ಪ್ರತಿಭಟನೆ ಮಾಡಿದರು.
ಇದನ್ನೂ ಓದಿ: ಕೋಲಾರ: ಮಾಲೂರು ಪುರಸಭೆ ಚುನಾವಣೆಯ ಮತ ಎಣಿಕೆ ವೇಳೆ ಕೈ-ಕಮಲ ಜಟಾಪಟಿ!