ಕೋಲಾರ: ಪೊಲೀಸರ ಮೇಲೆ ಲಾಂಗು, ಮಚ್ಚಿನಿಂದ ಹಲ್ಲೆ ಮಾಡಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ಹಿಡಿಯುವ ಸಲುವಾಗಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿರುವ ಘಟನೆ ಕಳೆದ ರಾತ್ರಿ ಕೋಲಾರ ಹೊರವಲಯದಲ್ಲಿ ನಡೆದಿದೆ.
ಬೆಂಗಳೂರಿನ ನಂದಿನಿ ಲೇಔಟ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಾದ ಕೆ.ಜಿ.ಹಳ್ಳಿ ನಿವಾಸಿ ಅಬ್ರಹಾಂ ಮತ್ತು ಮೆಹರಾಜ್ ಖಾನ್ ತಲೆಮರೆಸಿಕೊಂಡಿದ್ದರು. ಆರೋಪಿಗಳಿಬ್ಬರು ಕೋಲಾರದ ಅರಹಳ್ಳಿ ಗೇಟ್ ಸಮೀಪ ಇದ್ದಾರೆಂದು ಟವರ್ ಲೊಕೇಷನ್‌ನಲ್ಲಿ ಮಾಹಿತಿ ದೊರೆತಿತ್ತು. ಈ ಹಿನ್ನೆಲೆ ಬೆಂಗಳೂರು ನಂದಿನಿ ಲೇಔಟ್‌ನ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಐದು ಮಂದಿ ಕಾನ್ಸ್ಟೇಬಲ್ ಗಲ್‌ಪೇಟೆ ಪೊಲೀಸರ ಸಹಾಯದಿಂದ ಅರಹಳ್ಳಿ ಗೇಟ್ ಬಳಿ ಹುಡುಕಾಟ ನಡೆಸುತ್ತಿದ್ದರು.
ಈ ಸಮಯದಲ್ಲಿ ಆರೋಪಿಗಳಿಗೆ ಪೊಲೀಸರು ಸುತ್ತುವರೆದಿರುವ ಮಾಹಿತಿ ಸಿಕ್ಕಿದೆ. ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ವೇಳೆ ಪೊಲೀಸರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಲು ಮುಂದಾದರು. ಖಾಸಗಿ ವಾಹನ ಹಾಗೂ ಸಿವಿಲ್ ಡ್ರೆಸ್ನಲ್ಲಿದ್ದ ಪೊಲೀಸರ ಮೇಲೆ ಸ್ಥಳೀಯರು ತಿರುಗಿ ಬಿದ್ದರು. ಈ ವೇಳೆ, ಪೊಲೀಸರ ಖಾಸಗಿ ವಾಹನದ ಗಾಜುಗಳನ್ನು ಪುಡಿಪುಡಿ ಮಾಡಿದರು. ಹೀಗಾಗಿ ಬೆಂಗಳೂರು ಪೊಲೀಸರು ತಮ್ಮ ರಕ್ಷಣೆಗಾಗಿ ಗಾಳಿಯಲ್ಲಿ ಗುಂಡು ಹಾರಿಸಿ ಗುಂಪು ಚದುರಿಸಿದರು.
ಇನ್ನು ಪೊಲೀಸರನ್ನು ಕಂಡ ಆರೋಪಿಗಳು ಅಲ್ಲೇ ಇದ್ದ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಲು ಯತ್ನಿಸಿದ್ದಾರೆ. ಆದ್ರೆ ಆ ದ್ವಿಚಕ್ರ ವಾಹನ ಕೂಡಾ ಕೈಕೊಟ್ಟಿದೆ. ಈ ಹಿನ್ನೆಲೆ ದಾರಿಯಲ್ಲಿ ಬರುತ್ತಿದ್ದ ಗಾರೆ ಕೆಲಸ ಮಾಡುವ ಯೂಸಫ್ ಎಂಬಾತನಿಗೆ ಚಾಕು ತೋರಿಸಿ ಗಾಡಿ ಕಸಿದುಕೊಂಡು ಪರಾರಿಯಾಗಿದ್ದಾರೆ.
ಸದ್ಯ ಗಾಡಿ ಕಳೆದುಕೊಂಡ ಯೂಸುಫ್ ಕೋಲಾರ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಎಸ್ಪಿ ಕಾರ್ತಿಕ್ ರೆಡ್ಡಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಜೊತೆಗೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿ ಕಾರಿನ ಗಾಜು ಒಡೆದವರನ್ನು ಸಹ ಪೊಲೀಸರು ಹುಡುಕಾಡುತ್ತಿದ್ದಾರೆ.
ಒಟ್ಟಾರೆ ಕುಖ್ಯಾತ ಆರೋಪಿಗಳನ್ನು ಬಂಧಿಸಲು ಬಂದ ಪೊಲೀಸರಿಗೆ ಆರೋಪಿಗಳು ಚೆಳ್ಳೆಹಣ್ಣು ತಿನ್ನಿಸಿ ಪಾರಾರಿಯಾಗಿದ್ದು, ಈ ಘಟನೆ ಸಂಬಂಧ ಕೋಲಾರ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.