ಕೋಲಾರ: ರಸ್ತೆಗಾಗಿ ಮತದಾನದಿಂದ ದೂರ ಉಳಿಯುವ ಮೂಲಕ ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದಾರೆ. ಎಷ್ಟು ಹೊತ್ತಾದ್ರೂ ಮತ ಕೇಂದ್ರದತ್ತ ಸುಳಿಯದ ಮತದಾರರು ಗ್ರಾಮ ಪಂಚಾಯ್ತಿ ಮತದಾನ ಬಹಿಷ್ಕರಿಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮತಗಟ್ಟೆ ಸಂಖ್ಯೆ 17 ಕಂಬಿಪುರ ಗ್ರಾಮಸ್ಥರು ಮತದಾನಕ್ಕೆ ತರಳದೆ ಮನೆಯಲ್ಲೇ ಉಳಿದಿದ್ದಾರೆ. ಈ ಹಿನ್ನೆಲೆ ಮತಗಟ್ಟೆ ಖಾಲಿ ಖಾಲಿಯಾಗಿತ್ತು. ಮತದಾರರಿಗಾಗಿ ಚುನಾವಣಾ ಸಿಬ್ಬಂದಿ ಕಾದು ಕುಳಿತಿದ್ರು. ಸ್ಥಳಕ್ಕೆ ಮಾಲೂರು ಪೊಲೀಸರು ಹಾಗೂ ತಹಶೀಲ್ದಾರ್ ಮಂಜುನಾಥ್ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸುವ ಕಾರ್ಯ ನಡೆಸಿದರಾದ್ರೂ ಯಾವುದೇ ಪ್ರಯೋಜವಾಗಿಲ್ಲ. ಪಟ್ಟು ಬಿಡದ ಗ್ರಾಮಸ್ಥರು ಮತ ಬಹಿಷ್ಕಾರ ಮಾಡಿದ್ದಾರೆ.
ಕಂಬೀಪುರ ಗ್ರಾಮದಲ್ಲಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲದ ಕಾರಣ ವಿದ್ಯಾರ್ಥಿಗಳು ಪಕ್ಕದ ಅಬ್ಬೇನಹಳ್ಳಿ ಗ್ರಾಮಕ್ಕೆ ಹೋಗಬೇಕು. ಜೊತೆಗೆ ಗ್ರಾಮಸ್ಥರು ಅವಶ್ಯಕ ವಸ್ತುಗಳಿಗಾಗಿ ಪಕ್ಕದ ಗ್ರಾಮವನ್ನೇ ಅವಲಂಬಿಸಿದ್ದು, ಆ ಗ್ರಾಮಕ್ಕೆ ಹೋಗುವುದಕ್ಕೆ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲ. ಇಷ್ಟೂ ದಿನ ಕೆರೆಯಲ್ಲಿ ನಡೆದು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಹೋಗುತ್ತಿದ್ದರು. ಇದೀಗ ಕೆರೆಯಲ್ಲಿ ನೀರು ತುಂಬಿಕೊಂಡಿರುವ ಕಾರಣ ಗ್ರಾಮಸ್ಥರಿಗೆ ರಸ್ತೆಯಿಲ್ಲದಂತಾಗಿದೆ. ಕೇವಲ 1 ಕಿಲೋ ಮೀಟರ್ ದೂರದಲ್ಲಿರುವ ಗ್ರಾಮಕ್ಕೆ ಸುಮಾರು 20 ಕಿ.ಮೀ. ಸುತ್ತಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇದನ್ನೂ ಒದಿ:ಭಾರತದಲ್ಲಿ ಚಿರತೆಗಳ ಸಂತತಿ ಹೆಚ್ಚಳ ಕುರಿತು ಮೋದಿ ಟ್ವೀಟ್: ಭಾರತದಲ್ಲಿವೆ 12,852 ಚಿರತೆಗಳು!