ಕೋಲಾರ : ಹೊಸ ವರ್ಷದ ಅಂಗವಾಗಿ ಬಂಗಾರಪೇಟೆಯ ಕೋಟಿಲಿಂಗೇಶ್ವರದಲ್ಲಿ ಇಂದು ಜನ ಸಾಗರವೇ ಹರಿದು ಬಂದಿತ್ತು. ತಮ್ಮ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದ ಸಾವಿರಾರು ಭಕ್ತರು ಇಲ್ಲಿನ ವಿಶೇಷ ಆಕರ್ಷಣೆಯಾಗಿದ್ದ 108 ಅಡಿಯ ಶಿವಲಿಂಗದ ದರ್ಶನ ಪಡೆದು ಪುನೀತರಾದರು.
ವಿಶೇಷ ದಿನಗಳಲ್ಲಿ ಈ ಪ್ರದೇಶಕ್ಕೆ ಬೆಂಗಳೂರು, ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳದಿಂದಲೂ ಸಾವಿರಾರು ಭಕ್ತರು ಸಾಗರೋಪಾದಿಯಲ್ಲಿ ಹರಿದು ಬರುತ್ತಾರೆ. ಇಚ್ಚೆಯುಳ್ಳವರು ಇಲ್ಲಿ ಶಿವಲಿಂಗ ಪ್ರತಿಷ್ಠಾಪನೆ ಮಾಡಬಹುದು. ಆ ಮೂಲಕ ಭಕ್ತರು ತಮ್ಮ ಇಷ್ಠಾರ್ಥಗಳನ್ನು ಈಡೇರಿಸಿಕೊಳ್ಳುತ್ತಾರೆ.
ಏಕ ಕಾಲದಲ್ಲಿ ಶಿವಲಿಂಗ ದರ್ಶನ ಮಾಡುವ ಜನರಿಗಂತೂ ಭೂ ಕೈಲಾಸವೇ ಧರೆಗಿಳಿದ ಅನುಭವವಾಗುತ್ತದೆ. ಜೊತೆಗೆ ಇಂಥಾದೊಂದು ಪುಣ್ಯಕ್ಷೇತ್ರದಲ್ಲಿ ಹೊಸ ವರ್ಷವನ್ನು ಆರಂಭ ಮಾಡಿದ ತೃಪ್ತಿ ಭಕ್ತರಿಗಿದೆ.
ಕೊರೊನಾ ಹಿನ್ನೆಲೆ ಖಡ್ಡಾಯವಾಗಿ ಮಾಸ್ಕ್ ಧರಿಸಲು, ಸ್ಯಾನಿಟೈಸರ್ ಬಳಕೆ ಮಾಡಲು ದೇವಸ್ಥಾನದ ಆಡಳಿತ ಮಂಡಳಿ ಭಕ್ತರಿಗೆ ಸೂಚನೆ ನೀಡಿದೆ. ಆದರೆ, ಇಷ್ಟೊಂದು ಜನ ಸಾಗರದ ನಡುವೆ ಸಾಮಾಜಿಕ ಅಂತರ ಕಾಪಾಡುವುದು ಅಸಾಧ್ಯದ ಮಾತು, ಜನರು ಕೊರೊನಾವನ್ನು ಲೆಕ್ಕಿಸದೆ ದೇವರ ದರ್ಶನ ಪಡೆಯಲು ಮುಗಿಬಿದ್ದರು.