ಕೋಲಾರ: ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ವಿಚಾರವಾಗಿ ಹಾಗೂ ನಂ.13 ರಂದು ಕೋಲಾರಕ್ಕೆ ಭೇಟಿ ನೀಡುತ್ತಿರುವ ಸಿದ್ದರಾಮಯ್ಯ ಅವರ ಕಾರ್ಯಕ್ರಮಗಳ ಕುರಿತು ಇಂದು ಜಿಲ್ಲೆಯ ಮುಖಂಡರ ಸಭೆ ಕರೆಯಲಾಗಿತ್ತು.
ಕೋಲಾರ ಹೊರವಲಯದ ನಂದಿನಿ ಪ್ಯಾಲೇಸ್ನಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ನೇತೃತ್ವದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ, ಸಿದ್ದರಾಮಯ್ಯ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕೈ ಎತ್ತುವ ಮೂಲಕ ಮುಖಂಡರುಗಳು ಒಮ್ಮತ ವ್ಯಕ್ತಪಡಿಸಿದರು. ಜೊತೆಗೆ ಸಿದ್ದರಾಮಯ್ಯಗೆ ಘೋಷಣೆಗಳನ್ನ ಕೂಗುವ ಮೂಲಕ ಕಾರ್ಯಕರ್ತರು, ಮುಖಂಡರುಗಳು ಸಿದ್ದರಾಮಯ್ಯ ಸ್ಪರ್ಧೆಗೆ ಸಹಮತ ವ್ಯಕ್ತಪಡಿಸಿದರು.
ಇದೇ ವೇಳೆ, ಮಾಧ್ಯಮದವರೊಂದಿಗೆ ಮಾತನಾಡಿದ ಬಂಗಾರಪೇಟೆ ಶಾಸಕ ಎಸ್ ಎನ್ ನಾರಾಯಣಸ್ವಾಮಿ, ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧಿಸುವು ವಿಚಾರವಾಗಿ ಅವರದ್ದೇನು ಅಭ್ಯಂತರವಿಲ್ಲ, ಹೈಕಮಾಂಡ್ ತೀರ್ಮಾನ ನೀಡಿದರೆ ಸ್ಪರ್ಧೆ ಮಾಡುವುದಾಗಿ ಹೇಳಿದ್ದಾರೆಂದು ತಿಳಿಸಿದರು. ಈ ನಿಟ್ಟಿನಲ್ಲಿ ಕುರುಡುಮಲೆ ಗಣಪತಿಗೆ ಪೂಜೆ ಸಲ್ಲಿಸಿ ಮುಂದಿನ ಕಾರ್ಯಕ್ರಮ ಪ್ರಾರಂಭಿಸಬೇಕು ಎಂದು ಕೊಂಡಿದ್ದರು.
ಆದರೆ, ಬೇರೆ ಪಕ್ಷಗಳು ರಾಜ್ಯದಲ್ಲಿ ಪ್ರವಾಸ ಮಾಡುವ ನಿಟ್ಟಿನಲ್ಲಿ ಕುರುಡುಮಲೆಗೆ ಭೇಟಿ ನೀಡುತ್ತಿದ್ದಾರೆಂದು ಅಪಪ್ರಚಾರ ಮಾಡಿದ ಹಿನ್ನೆಲೆ, ಜಿಲ್ಲೆಯ ಎಲ್ಲ ಮುಖಂಡರು ಸೇರಿ ಸಿದ್ದರಾಮಯ್ಯ ಅವರು ಕೋಲಾರಕ್ಕೆ ಬರಬೇಕೆಂದು ತಿರ್ಮಾನ ಕೈಗೊಳ್ಳಲಾಗಿದ್ದು, ಅದರಂತೆ ನ.13 ಭಾನುವಾರದಂದು ಸಿದ್ದರಾಮಯ್ಯ ಅವರು ಕೋಲಾರಕ್ಕೆ ಬರಲಿದ್ದಾರೆ ಎಂದು ಶಾಸಕ ಎಸ್ ಎನ್ ನಾರಾಯಣ ಸ್ವಾಮಿ ಹೇಳಿದರು.
ಜಿಲ್ಲೆಗೆ ಆಗಮಿಸಿದ ನಂತರ ಸಿದ್ದರಾಮಯ್ಯ ಮೊದಲಿಗೆ ಕೋಲಾರದ ಶಕ್ತಿ ದೇವತೆ ಕೋಲಾರಮ್ಮನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಚರ್ಚ್ನಲ್ಲಿ ಪ್ರಾರ್ಥನೆ ಸಲ್ಲಿಸಿ, ತದ ನಂತರ ವಾಲ್ಮೀಕಿ ಪುತ್ಥಳಿ, ಸಂಗೊಳ್ಳಿ ರಾಯಣ್ಣ, ಮಹಾತ್ಮಾ ಗಾಂಧಿ, ಅಂಬೇಡ್ಕರ್, ಕೈವಾರ ತಾತಯ್ಯ ಪುತ್ಥಳಿಗೆ ಮಾಲಾರ್ಪಣೆ ಮಾಡಲಿದ್ದಾರೆ. ನಂತರ ಕ್ಲಾಕ್ ಟವರ್ಗೆ ಭೇಟಿ ನೀಡಿ, ಅಲ್ಲಿಂದ ನರಸಾಪುರದ ಕೆ.ಸಿ.ವ್ಯಾಲಿ ನೀರು ಬಂದಿರುವ ಕೆರೆಗೆ ಭೇಟಿ ಕೊಟ್ಟು ವೀಕ್ಷಣೆ ಮಾಡಿ, ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ.
ಬಳಿಕ ತಾಲೂಕಿನ ಸೀತಿ ಬೈರವೇಶ್ವರ ದೇವಾಲಯದಲ್ಲಿ ಆಶೀರ್ವಾದವನ್ನ ಪಡೆದು, ದೇವಾಲಯದ ಬಳಿಯೇ ಕಾರ್ಯಕರ್ತರೊಂದಿಗೆ ಊಟವನ್ನ ಮಾಡಿ, ನಂತರ ದಿವಂಗತ ಬೈರೇಗೌಡ ಅವರ ಸಮಾಧಿಗೆ ಪೂಜೆ ಸಲ್ಲಿಸಿ, ಎಲ್ಲ ಸಮುದಾಯದ ಮುಖಂಡರೊಂದಿಗೆ ಚರ್ಚೆ ಮಾಡುವ ಕಾರ್ಯಕ್ರಮ, ಸಿದ್ದರಾಮಯ್ಯ ಅವರ ಅಭಿಪ್ರಾಯದಂತೆ ನಿಗದಿಪಡಿಸಲಾಗಿದೆ ಎಂದರು.
ಇದನ್ನೂ ಓದಿ: ಸಿದ್ದರಾಮಯ್ಯಗೆ ಸ್ಪರ್ಧಿಸಲು ಕೋಲಾರ ವಿಧಾನಸಭಾ ಕ್ಷೇತ್ರ ಸೇಫ್: ಖಾಸಗಿ ಏಜೆನ್ಸಿಗಳ ಸಲಹೆ