ಕೋಲಾರ : ಮುಖ್ಯಮಂತ್ರಿಗಳ ಸ್ಥಾನದಲ್ಲಿ ಯಾವ ರೀತಿ ನಡೆದುಕೊಳ್ಳಬಹುದು, ಮತ್ತೊಂದು ಮಗದೊಂದು ಎನ್ನುವುದನ್ನು ಕುಮಾರಸ್ವಾಮಿ ಅವರಿಂದ ಸಿದ್ದರಾಮಯ್ಯ ಕಲಿಯುವ ಅವಶ್ಯಕತೆ ಇಲ್ಲ ಎಂದು ಕೋಲಾರದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ ಸುಧಾಕರ್ ಹೇಳಿದ್ದಾರೆ.
ಇಂದು ಕೋಲಾರದಲ್ಲಿ ಕುಮಾರಸ್ವಾಮಿ ಅವರ ವರ್ಗಾವಣೆ ದಂಧೆ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಅವರು ಹಿರಿಯರು, ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಗಳಾಗಿದ್ದವರು. ಮುಖ್ಯಮಂತ್ರಿ ಸ್ಥಾನದಲ್ಲಿ ಯಾವ ರೀತಿ ನಡೆದುಕೊಳ್ಳಬಹುದು ಎಂಬುದನ್ನ ಕುಮಾರಸ್ವಾಮಿ ಅವರಿಂದ ಸಿದ್ದರಾಮಯ್ಯ ಕಲಿಯುವ ಅವಶ್ಯಕತೆ ಇಲ್ಲ ಎಂದರು.
ಅಲ್ಲದೆ ಶೇ 40ರಷ್ಟು ಕಮಿಷನ್ ಸೇರಿದಂತೆ ಹಿಂದಿನ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಕುರಿತು ಟೀಕೆ ಮಾಡಿರುವ ನಾವು ಬಹಳ ಜವಾಬ್ದಾರಿಯಿಂದ ಸರ್ಕಾರ ನಡೆಸುತ್ತಿದ್ದೇವೆ. ಯಾವುದೇ ಕಾರಣಕ್ಕೂ ಕುಮಾರಸ್ವಾಮಿ ಅವರು ಹೇಳಿದ ರೀತಿಯಲ್ಲಿ ವ್ಯವಸ್ಥೆ ಇಲ್ಲ. ಬಹುಶ ಅವರು ರಾಜಕೀಯ ಹೇಳಿಕೆ ಕೊಟ್ಟಿದ್ದಾರೆ. ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದರು.
ರಾಜ್ಯ ಶಿಕ್ಷಣ ನೀತಿ ತರುವುದಾಗಿ ಹೇಳಿದ್ದೇವೆ: ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಮಾತನಾಡಿದ ಅವರು, ಈಗಾಗಲೇ ಬಿಜೆಪಿ ಅಧಿಕಾರದಲ್ಲಿರುವ ಕಡೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಲ್ಲಿದೆ. ಆದರೆ, ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಬದಲಿಗೆ ರಾಜ್ಯ ಶಿಕ್ಷಣ ನೀತಿ ತರುವುದಾಗಿ ಹೇಳಿದ್ದೇವೆ. ಈಗಾಗಲೇ ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿ ವಿದ್ಯಾರ್ಥಿಗಳು ಎರಡು ವರ್ಷ ವ್ಯಾಸಂಗ ಮಾಡಿದ್ದಾರೆ. ಹೀಗಾಗಿ ಬಹಳ ಯೋಚನೆ ಮಾಡಿ ತೀರ್ಮಾನ ತೆಗೆದುಕೊಳ್ಳಬೇಕು ಎಂದರು. ಇನ್ನು ಈ ಕುರಿತು ಶಿಕ್ಷಣ ತಜ್ಞರೊಂದಿಗೆ ಚರ್ಚೆ ಮಾಡಿದ್ದೇವೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತ ದೃಷ್ಟಿಯನ್ನ ಗಮನದಲ್ಲಿ ಇರಿಸಿಕೊಂಡು ಬದಲಾವಣೆ ಯಾವ ರೀತಿ ತರಬೇಕೆಂದು ತೀರ್ಮಾನಿಸಲಾಗುವುದು ಎಂದರು.
ರಾಜ್ಯದಲ್ಲಿ ವೈಎಸ್ಟಿ ತೆರಿಗೆ ಜಾರಿಗೆ : ಇನ್ನೊಂದೆಡೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೊಸದಾಗಿ ವೈಎಸ್ಟಿ (YST) ತೆರಿಗೆ ಆರಂಭವಾಗಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು (ಜುಲೈ 2-2023) ಆರೋಪಿಸಿದ್ದರು.
ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾತನಾಡಿದ್ದ ಅವರು, ವೈಎಸ್ಟಿ ಎಂದರೆ ಏನು? ಎಂದು ಕೇಳಿದ ಪ್ರಶ್ನೆಗೆ ಮಧ್ಯರಾತ್ರಿವರೆಗೂ ತಮ್ಮ ಮನೆಗಳಲ್ಲಿ ಅಧಿಕಾರಿಗಳ ಸಭೆ ಮಾಡುವ ಘನಂದಾರಿ ವ್ಯಕ್ತಿಗಳನ್ನು ಕೇಳಿ? ಈಗಾಗಲೇ ವರ್ಗಾವಣೆ ದಂಧೆಗಾಗಿ ಯಾರನ್ನೆಲ್ಲ ಫೀಲ್ಡಿಗೆ ಇಳಿಸಿ ಗುಪ್ತ ಸಭೆಗಳನ್ನು ಮಾಡುತ್ತಿದ್ದಾರೋ ಅವರನ್ನೇ ಕೇಳಿ? ನೀವೂ ಪತ್ತೆ ಹಚ್ಚಿ ಎಂದು ಹೇಳಿದ್ದರು.
ವರ್ಗಾವಣೆ ದಂಧೆ ಬಗ್ಗೆ ತಮ್ಮ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಕೊಟ್ಟಿರುವ ಹೇಳಿಕೆ ಬಗ್ಗೆ ಕಿಡಿಕಾರಿದ್ದ ಹೆಚ್ಡಿಕೆ, ನಾನು ಸಿದ್ದರಾಮಯ್ಯ ಅವರನ್ನು ಕೇಳಲು ಬಯಸುತ್ತೇನೆ. ನಿಮ್ಮ ಪಕ್ಷದ ಜತೆ ಸರ್ಕಾರ ರಚನೆ ಮಾಡಿದ್ದಾಗ ನೀವೆಲ್ಲ ಏನೇನು ಮಾಡಿದಿರಿ ಎನ್ನುವುದು ಗೊತ್ತಿದೆ. ಪೊಗದಸ್ತಾದ ಇಲಾಖೆಗಳನ್ನು ಇಟ್ಟುಕೊಂಡಿದ್ದ ನಿಮ್ಮ ಮಂತ್ರಿಗಳು ಏನು ಮಾಡಿದರು?. ಮುಖ್ಯಮಂತ್ರಿಯಾಗಿ ನಾನು ಯಾವೊಬ್ಬ ಅಧಿಕಾರಿಯನ್ನು ವರ್ಗಾವಣೆ ಮಾಡುವಂತೆಯೇ ಇರಲಿಲ್ಲ. ಎಲ್ಲ ದಂಧೆಗಳು ಯಾರ ಮೂಗಿನಡಿ ನಡೆಯುತ್ತಿದ್ದವು ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಹಣ ಕೊಟ್ಟು ಪೋಸ್ಟ್ ಪಡೆಯಲು ಬಂದವರನ್ನು ನಾನು ದೂರ ಇಟ್ಟಿದ್ದೆ. ಬಿಡಿಎ ಮೇಲೆ ಬಂದು ಕೂರಲು ಬಂದ ಅಧಿಕಾರಿಯನ್ನು ಹೊರಗಟ್ಟಿದ್ದೆ. ಯಲಹಂಕ ತಹಶೀಲ್ದಾರ್ ಹುದ್ದೆಗೆ ಒಂದೂವರೆ ಕೋಟಿ ಕೊಡ್ತೀವಿ ಅಂದವರನ್ನು ಆಚೆಗೆ ಇಟ್ಟಿದ್ದೆ. ಇದು ನಾನು ನಡೆಸಿದ್ದ ಆಡಳಿತ. ಈಗ ನೋಡಿದರೆ ವೈಎಸ್ಟಿ ತೆರಿಗೆ ಅಂತ ಇವರು ಶುರು ಮಾಡಿಕೊಂಡಿದ್ದಾರೆ ಎಂದು ಟೀಕಿಸಿದ್ದರು.
ಇದನ್ನೂ ಓದಿ: ರಾಜ್ಯದಲ್ಲಿ ವೈಎಸ್ಟಿ ತೆರಿಗೆ ಜಾರಿಗೆ ಬಂದಿದೆ: ಹೆಚ್ ಡಿ ಕುಮಾರಸ್ವಾಮಿ