ಕೋಲಾರ: ಕೆ.ಆರ್ ರಮೇಶ್ ಕುಮಾರ್ ಅವರಿಗೆ ಕದಿಯುವ ಬುದ್ದಿ, ಸುಳ್ಳು ಹೇಳುವ ಬುದ್ದಿ ಇದೆ. ಅವರು ತಾನೊಬ್ಬನೇ ಸತ್ಯ ಹರಿಶ್ಚಂದ್ರ ಅಂದುಕೊಂಡಿದ್ದಾರೆ, ಆತ ಹರಿಶ್ಚಂದ್ರನಂತೆ ಮಾತನಾಡುತ್ತಾರೆ ಅಷ್ಟೇ ಎಂದು ಕೋಲಾರದಲ್ಲಿ ಎಂಟಿಬಿ ನಾಗರಾಜ್ ಮಾಜಿ ಸ್ಪೀಕರ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ರು.
ಪಕ್ಷದ ಮುಖಂಡರು ತೆಗೆದುಕೊಳ್ಳುವ ಏಕಪಕ್ಷೀಯ ನಿರ್ಧಾರಗಳಿಂದ ಹಾಗೂ ಸ್ವಾರ್ಥ ರಾಜಕಾರಣದಿಂದ ದೇಶದಲ್ಲಿ ಕಾಂಗ್ರೆಸ್ ನೆಲಕಚ್ಚಿದೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಮುಖಂಡರಿಗೆ ಟಾಂಗ್ ನೀಡಿದ್ರು. ನಾನು ನಿಷ್ಟಾವಂತ ಕಾಂಗ್ರೆಸಿಗ, ಬಿಜೆಪಿ ಅವರಿಂದ ದುಡ್ಡು ತೆಗೆದುಕೊಂಡು ರಾಜೀನಾಮೆ ನೀಡಿದ್ದಾರೆಂದು ನನ್ನ ಬಗ್ಗೆ ಸುಳ್ಳು ಹೇಳುತ್ತಿರುವ ಇವರ ಬಗ್ಗೆ ಬಿಚ್ಚಿಡಬೇಕಾಗುತ್ತದೆ. ಜೊತೆಗೆ ಇವರೆಲ್ಲರ ಕಥೆಗಳನ್ನ ಹೇಳಬೇಕಾಗುತ್ತದೆ ಎಂದು ಕಾಂಗ್ರೆಸ್ ಮುಖಂಡರಿಗೆ ಎಚ್ಚರಿಕೆ ನೀಡಿದ್ರು.
ಇನ್ನೂ ಇವರ ಸರ್ಕಾರ ಅಧಿಕಾರದಲ್ಲಿದ್ದಾಗ ಎಷ್ಟು ಪ್ರಾಮಾಣಿಕವಾಗಿ ಆಡಳಿತ ಮಾಡಿದ್ದಾರೆ ಎಂಬುದನ್ನು ನಾನು ಹೇಳುವೆ. ಯಾವುದೇ ಮಾದ್ಯಮದ ಎದುರು ಅಥವಾ ದೇವಸ್ಥಾನದ ಎದುರಾದರೂ ನಾನು ಹೇಳಲು ಸಿದ್ದನಿದ್ದೇನೆ. ತಾಕತ್ ಇದ್ದರೆ ಇವರು ಬಂದು ಹೇಳಲಿ ಎಂದು ಕಾಂಗ್ರೆಸ್ ಮುಂಚೂಣಿ ನಾಯಕರಿಗೆ ಸವಾಲು ಎಸೆದರು.
ಮೈತ್ರಿ ಸರ್ಕಾರದ ಆಡಳಿತ, ಅಧಿಕಾರ ವೈಫಲ್ಯಗಳಿಂದ ಬೇಸತ್ತು ಹೊರಗೆ ಬಂದಿದ್ದೇವೆ. ಮೈತ್ರಿ ಸರ್ಕಾರ ಬೀಳಲು ದೇವೇಗೌಡ ಹಾಗೂ ಸಿದ್ದರಾಮಯ್ಯ ಇಬ್ಬರೂ ಕಾರಣ ಎಂದರು. ಜೊತೆಗೆ ಮೈತ್ರಿ ಸರ್ಕಾರದಲ್ಲಿ ಮಂತ್ರಿಯಾಗಿ ಏನು ಮಾಡಲಾಗುತ್ತಿಲ್ಲ, ಕುಮಾರಸ್ವಾಮಿ ಹಾಗೂ ರೇವಣ್ಣ ನನ್ನ ವಸತಿ ಖಾತೆಯಲ್ಲಿ ಮೂಗು ತೂರಿಸುತ್ತಿದ್ದರು. ಹೀಗಾಗಿ ರಾಜೀನಾಮೆ ನೀಡುತ್ತೇನೆ ಎಂದು ಮೂರು ಬಾರಿ ಸಿದ್ದರಾಮಯ್ಯ ಅವರಿಗೆ ಮುಂಚೆಯೇ ಹೇಳಿದ್ದೆ ಎಂದು ಹೇಳಿದ್ರು.
ಡಿ.ಕೆ.ಶಿವಕುಮಾರ್‍ಗೆ ಚಾಲೆಂಜ್ ಮಾಡಿದ ಎಂಟಿಬಿ, ಉಪ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಬಂದು ನನ್ನ ಕ್ಷೇತ್ರದಲ್ಲಿ ತೊಡೆ ತಟ್ಟಲಿ. ಇಂತಹ ತೊಡೆ ತಟ್ಟುವರನ್ನು ನಾನು ನೋಡಿದ್ದೇನೆ ಎಂದರು. ಜೊತೆಗೆ ಮುಂದಿನ ದಿನಗಳಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರ ಬಗ್ಗೆ ಹೇಳುತ್ತೇನೆಂದು ಮಾರ್ಮಿಕವಾಗಿ ನುಡಿದ್ರು.
ಅನರ್ಹತೆಯ ವಿಚಾರವಾಗಿ ಮಾತಾಡಿದ ಅವರು, ನ್ಯಾಯಾಲಯಕ್ಕಿಂತ ದೊಡ್ಡದು ಈ ದೇಶದಲ್ಲಿ ಏನೂ ಇಲ್ಲ. ನ್ಯಾಯಾಲಯ ನಿರ್ಧಾರಕ್ಕೆ ತಲೆ ಬಾಗುವುದಾಗಿ ಹೇಳಿದ್ರು.