ಕೋಲಾರ: ಜನರ ಸೇವೆಯೇ ದೇವರ ಸೇವೆ, ಕರ್ತವ್ಯವೇ ದೇವರು, ರಾಜಕೀಯ ಕೋಪದಿಂದ ಸಿಎಂ ಕುಮಾರಸ್ವಾಮಿ ಹಾಗೆ ಮಾತನಾಡಿದ್ದರು ಸಚಿವ ಎಂಟಿಬಿ ನಾಗರಾಜ್ ಸಮರ್ಥಿಸಿಕೊಂಡಿದ್ದಾರೆ.
ನಗರದ ಚನ್ನಯ್ಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕುರುಬ ಸಮಾಜದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರಿಗಾಗಿ ಎಲ್ಲ ಯೋಜನೆಗಳನ್ನು ಕೊಟ್ಟ ಮೇಲೂ ಸೋಲಾಗಿದ್ದಕ್ಕೆ ಕೋಪದಿಂದ 'ಮೋದಿಗೆ ವೋಟ್ ಹಾಕಿ ಸಮಸ್ಯೆ ನಮ್ಗೆ ಹೇಳ್ತಿರಾ' ಎಂದು ರಾಯಚೂರಲ್ಲಿ ಪ್ರತಿಭಟನಾಕಾರರಿಗೆ ಸಿಎಂ ಪ್ರಶ್ನಿಸಿದ್ದನ್ನು ಸಚಿವ ಸಮರ್ಥಿಸಿಕೊಂಡ್ರು.
ಇನ್ನು ಸಿದ್ದರಾಮಯ್ಯ ಕೊಟ್ಟ ಅಕ್ಕಿಯ ಅನ್ನ ತಿಂದು ಜನ ಬಿಜೆಪಿಗೆ ವೋಟು ಹಾಕಿದರು ಎಂದು ಮಾಜಿ ಸಂಸದ ಕೆ ಹೆಚ್ ಮುನಿಯಪ್ಪ ಹೇಳಿಕೆಗೆ ಸಚಿವ ಎಂಟಿಬಿ ನಾಗರಾಜ್ ಆಕ್ಷೇಪ ವ್ಯಕ್ತಪಡಿಸಿದರು.
ಜನರಿಗೆ ಯೋಜನೆ ನೀಡಿ, ವೋಟ್ ಯಾಕೆ ಹಾಕಿಲ್ಲವೆಂದು ಕೇಳೋದು ಸಮಂಜಸವಲ್ಲ, ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ನೀಡಿದ್ದ ಎಲ್ಲಾ ಭರವಸೆ ಈಡೇರಿಸಲಾಗಿದೆ. ಕೊಟ್ಟಿದ್ದನ್ನ ಹೇಳಿಕೊಳ್ಳುವುದು ಬೇಡ ಎಂದು ಕಾಂಗ್ರೆಸ್ ಹಿರಿಯ ನಾಯಕನಿಗೆ ಎಂಟಿಬಿ ಟಾಂಗ್ ಕೊಟ್ಟರು.
ಸರ್ಕಾರ ಬಡವರ ಪರವಾಗಿ ಕೊಟ್ಟ ಯೋಜನೆ ಹೇಳಿಕೊಳ್ಳಬಾರದು. ಮತ್ತೆ ಸಿದ್ದರಾಮಯ್ಯ ಅಹಿಂದ ಮೂಲಕ ಪಕ್ಷ ಸಂಘಟನೆಗೆ ಮುಂದಾಗಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕಾಂಗ್ರೆಸ್ ಎಂದರೇನೇ ಅಹಿಂದ. ಸಿದ್ದರಾಮಯ್ಯ ಅಂದ್ರೆ ಅಹಿಂದ, ಅಹಿಂದವನ್ನು ಮತ್ತೆ ಕಟ್ಟುವುದೇನಿಲ್ಲ ಎಂದು ತಿಳಿಸಿದರು.
ಇನ್ನು ಕೆ.ಸಿ. ವ್ಯಾಲಿ ಯೋಜನೆ ಹೊಸಕೋಟೆ ಮೂಲಕ ಹಾದು ಬಂದಿದ್ದು, ಯೋಜನೆ ಆರಂಭದಲ್ಲಿ ನಡೆದಿದ್ದ ಮಾತುಕತೆಯಂತೆ 5 ಕೆರೆಗಳಿಗೆ ನೀರು ಕೊಡಬೇಕು. ಆದರೆ ಇದರಲ್ಲಿ ಯಾವುದೇ ಪಾಲುದಾರಿಕೆ ಕೇಳಿಲ್ಲವೆಂದು ಸಚಿವ ಎಂಟಿಬಿ ನಾಗರಾಜ್ ಸ್ಪಷ್ಟಪಡಿಸಿದರು.