ಕೋಲಾರ: ಸಂಬಂಧಿಕರ ಕಿರುಕುಳ ತಾಳಲಾರದೆ ತಾಯಿ ಮಗಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಇಲ್ಲಿನ ನರಸಾಪುರದಲ್ಲಿ ನಡೆದಿದೆ. ಬೆಂಗಳೂರಿನ ಹೊರಮಾವು ಮೂಲದ ತಾಯಿ ನಂದಿತಾ (40) ಹಾಗೂ ಮಗಳು ಪ್ರಗತಿ (21) ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿಗಳಾಗಿದ್ದಾರೆ.
ಆತ್ಮಹತ್ಯೆಗೂ ಮುನ್ನ 11 ಪುಟಗಳ ಡೆತ್ನೋಟ್ ಬರೆದಿಟ್ಟಿದ್ದು, ಸಾವಿಗೆ ಸಂಬಂಧಿಕರ ಕಿರುಕುಳವೇ ಕಾರಣ ಎಂದು ಉಲ್ಲೇಖಿಸಿದ್ದಾರೆ. ಘಟನೆ ತಿಳಿದು ಸ್ಥಳಕ್ಕಾಗಮಿಸಿದ ವೇಮಗಲ್ ಠಾಣೆ ಪೊಲೀಸರು ಮಧ್ಯರಾತ್ರಿ ಸುಮಾರಿಗೆ ಮೃತದೇಹಗಳನ್ನು ಹೊರತೆಗೆದು ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.
ಸಂಬಂಧಿಕರ ಕಿರುಕುಳವೇ ಆತ್ಮಹತ್ಯೆಗೆ ಕಾರಣ
ಮೂರು ತಿಂಗಳ ಹಿಂದೆಯಷ್ಟೇ ನಂದಿತಾ ಪತಿ ಮೂರ್ತಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಈ ಘಟನೆ ನಡೆದ ಬಳಿಕ ಪತಿಯ ತಮ್ಮ ಹರೀಶ್ ಎಂಬಾತ ಆಸ್ತಿ ಕೈಬಿಟ್ಟು ಹೋಗುವ ಭೀತಿಯಲ್ಲಿ ನಿತ್ಯ ಮಾನಸಿಕ ಹಿಂಸೆ ನೀಡುತ್ತಿದ್ದ ಎಂದು ಡೆತ್ನೋಟ್ನಲ್ಲಿ ಆರೋಪಿಸಲಾಗಿದೆ. ಇವನಲ್ಲದೆ ನಂದಿತಾ ಪತಿ ಮೂರ್ತಿಯವರಿಗೆ ಸಾಲ ನೀಡಿದ್ದ ಅಭಿಷೇಕ್ ಎಂಬಾತ ಸಹ ಸಾಲ ಮರುಪಾವತಿಸುವಂತೆ ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದರಿಂದ ಮನನೊಂದಿದ್ದ ತಾಯಿ-ಮಗಳು ಅಂತಿಮವಾಗಿ ಆತ್ಮಹತ್ಯೆಯ ನಿರ್ಧಾರ ಮಾಡಿದ್ದಾರೆ. ಇದಕ್ಕಾಗಿ ನರಸಾಪುರದ ಕೆರೆ ಬಳಿ ಬಂದಿರುವ ಅವರು ವೇಲ್ ಅನ್ನು ಇಬ್ಬರೂ ಕಟ್ಟಿಕೊಂಡಿದ್ದಲ್ಲದೆ, ನಂದಿತಾ ಸಹೋದರಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವ ವಿಷಯ ತಿಳಿಸಿ ಮೊಬೈಲ್ ಸ್ವಿಚ್ ಆಫ್ ಮಾಡಿ ಕೆರೆಗೆ ಹಾರಿದ್ದಾರೆ.
ಇದನ್ನು ಓದಿ: ಒಂದೇ ಕುಟುಂಬದ ಆರು ಮಂದಿಯಿಂದ ಆತ್ಮಹತ್ಯೆ ಯತ್ನ: ಬಾಲಕಿ ಸೇರಿ ಮೂವರ ದುರ್ಮರಣ