ಕೋಲಾರ : ತಾಲೂಕಿನ ಹರಟಿಮಲ್ಲಂಡಹಳ್ಳಿಯಲ್ಲಿ ಕಳೆದೊಂದು ತಿಂಗಳಿಂದಲೂ ಕೋತಿಗಳ ಗುಂಪೊಂದು ಗ್ರಾಮಸ್ಥರಿಗೆ ಕಾಟ ಕೊಡುತ್ತಿವೆ. ಹತ್ತಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡುವುದಲ್ಲದೇ, ಸಿಕ್ಕ ತಿಂಡಿ ತಿನಿಸುಗಳನ್ನು ಕಿತ್ತುಕೊಂಡು ಪರಾರಿಯಾಗುತ್ತಿವೆ.
ದಿನದಿಂದ ದಿನಕ್ಕೆ ಗ್ರಾಮದಲ್ಲಿ ಕೋತಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಜನರ ಮೇಲೆ ತಮ್ಮ ರೌದ್ರಾವತಾರ ತೋರುತ್ತಿವೆ. ಇದರಿಂದ ಬೇಸತ್ತಿರುವ ಜನರು ಕೋತಿಗಳನ್ನು ಹಿಡಿದು ಬೇರೆಡೆ ಬಿಡುವಂತೆ ಮನವಿ ಮಾಡುತ್ತಿದ್ದಾರೆ.
ಮನೆಗಳಿಗೆ ನೇರವಾಗಿ ದಾಳಿ ಮಾಡುವ ಕೋತಿಗಳ ಸೈನ್ಯ ಅಡುಗೆ, ತಿಂಡಿ ತಿನಿಸುಗಳನ್ನು ಕಿತ್ತುಕೊಂಡು ಹೋಗುತ್ತಿವೆ. ಅಲ್ಲದೇ ಅಂಗಡಿಗಳಿಂದ ಏನಾದರೂ ತರುವ ಜನರ ಮೇಲೆ ದಾಳಿ ಮಾಡಿ ಕಸಿದುಕೊಂಡು ಹೋಗುತ್ತವೆ.
ಮಕ್ಕಳು ಶಾಲೆ ಅಥವಾ ಹೊರಗೆ ಹೋಗಬೇಕಾದರೆ ಪೋಷಕರು ಕೈಯಲ್ಲಿ ಕೋಲು ಹಿಡಿದು ಮಕ್ಕಳನ್ನು ಕರೆದುಕೊಂಡು ಹೋಗಬೇಕು. ಮನೆಯಲ್ಲಿ ಅಡುಗೆ ಮಾಡಬೇಕೆಂದರೆ ಮನೆ ಬಾಗಿಲಲ್ಲಿ ಒಬ್ಬರು ಕಾವಲಿರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಬೇರೆ ಊರುಗಳಿಂದ ಕೋತಿಗಳನ್ನು ಹಿಡಿದು ತಂದು ಬಿಡಲಾಗುತ್ತಿದೆ ಎಂಬ ಆರೋಪ ಗ್ರಾಮಸ್ಥರದ್ದಾಗಿದೆ. ಹಾಗಾಗಿ, ಗ್ರಾಮದಲ್ಲಿನ ಕೋತಿಗಳ ಹಾವಳಿಯ ಬಗ್ಗೆ ಅರಣ್ಯ ಇಲಾಖೆಗೆ, ಸ್ಥಳೀಯ ಹರಟಿ ಗ್ರಾಮ ಪಂಚಾಯತ್‌ಗೂ ಕೂಡ ದೂರು ನೀಡಲಾಗಿದ್ದು ಕೋತಿಗಳನ್ನು ಹಿಡಿದು ಬೇರೆಡೆ ಬಿಡುವಂತೆ ಮನವಿ ಮಾಡಲಾಗಿದೆ. ಆದರೂ ಯಾರೊಬ್ಬರು ಕನಿಷ್ಠ ಕಾಳಜಿ ತೋರಿಸುತ್ತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.