ಕೋಲಾರ: ಲೋಕಸಭಾ ಚುಣಾವಣೆ ಹತ್ತಿರವಾಗುತ್ತಿದ್ದಂತೆ ಮೋದಿ ಸೇರಿದಂತೆ ಎಲ್ಲರೂ ಸಮಾವೇಶಗಳ ಮೂಲಕ ಚುನಾವಣಾ ಪ್ರಚಾರ ಆರಂಭ ಮಾಡಿದ್ದಾರೆ. ಆದ್ರೆ, ಇಲ್ಲೊಂದು ಕಡೆ ಬಿಜೆಪಿ ಕಾರ್ಯಕರ್ತರಲ್ಲದ ಹಲವಾರು ಮಂದಿ ಮೋದಿ ಮೋಡಿಗೆ ಒಳಗಾಗಿ ತಮ್ಮ ಸೇವೆಯ ಮೂಲಕವೇ ಮೋದಿಗೆ ಮತ ಹಾಕಿ ಅಂತ ಪ್ರಚಾರ ಶುರು ಮಾಡಿದ್ದಾರೆ.
ಇನ್ನೇನು ಲೋಕಸಭಾ ಚುನಾವಣೆಗಳು ಹತ್ತಿರವಾಗುತ್ತಿರುವ ಬೆನ್ನಲ್ಲೇ ಮೋದಿ ಅಭಿಮಾನಿಗಳು ತಮ್ಮಷ್ಟಕ್ಕೆ ತಾವೇ ಸ್ವಯಂ ಪ್ರೇರಿತವಾಗಿ ಲೋಕಸಭಾ ಚುನಾವಣಾ ಪ್ರಚಾರ ಆರಂಭ ಮಾಡಿದ್ದಾರೆ. 'ಮತ್ತೊಮ್ಮೆ ಮೋದಿ' ಅನ್ನೋ ಘೋಷಣೆ ಇಟ್ಟುಕೊಂಡು ತಮ್ಮ ಕೈಲಾದ ಸೇವೆ ಮಾಡೋ ಮೂಲಕ ಮೋದಿನ ಬೆಂಬಲಿಸಿ ಎನ್ನುತ್ತಿದ್ದಾರೆ.
ಕೋಲಾರ ಜಿಲ್ಲೆ ಮಾಲೂರು ಪಟ್ಟಣದ ಸವಿತಾ ಸಮಾಜದ ಚಲಪತಿ ಹಾಗೂ ಸುರೇಶ್, ಮೋದಿಗೆ ಮತ ಹಾಕುವವರಿಗೆ ಉಚಿತವಾಗಿ ವಾರದಲ್ಲಿ ಒಂದು ದಿನ ತಮ್ಮ ಸೆಲೂನ್ನಲ್ಲಿ ಹೇರ್ ಕಟ್ ಮಾಡುವ ಮೂಲಕ ಮೋದಿಗೆ ಮತ ನೀಡಿ ಅನ್ನೋ ಮನವಿ ಮಾಡುತ್ತಿದ್ದಾರೆ. ಇನ್ನು ಇದೇ ತಾಲೂಕಿನ ಕುಡಿಯನೂರಿನ ಮಂಜುನಾಥ್ ಹೋಟೆಲ್ ಮಾಲೀಕ ಡಮರುಗೇಶ್ ಎಂಬಾತ ಮೋದಿಗಾಗಿ ವಾರದಲ್ಲಿ ಒಂದು ದಿನ ಹೋಟೆಲ್ನಲ್ಲಿ ಬರುವ ಜನರಿಗೆ ಮೋದಿಗಾಗಿ ವೋಟ್ ಮಾಡಿ ಎಂದು ಮನವಿ ಮಾಡುತ್ತಾ ಉಚಿತ ಊಟದ ವ್ಯವಸ್ಥೆ ಮಾಡಿದ್ದಾರೆ.
ಅಷ್ಟೇ ಅಲ್ಲದೆ, ಇದೇ ತಾಲೂಕಿನ ದಿನ್ನೇರಿ ಹಾರೋಹಳ್ಳಿ ಗ್ರಾಮದ ಲಕ್ಷ್ಮೀ ಎಂಬಾಕೆ ಬಟ್ಟೆ ಹೊಲಿದು ಜೀವನ ಸಾಗಿಸುತ್ತಿದ್ದು, ಮೋದಿಗೆ ವೋಟ್ ಮಾಡಿವರಿಗೆ ಉಚಿತವಾಗಿ ಒಂದು ಜೊತೆ ಬಟ್ಟೆಯನ್ನು ಹೊಲಿದು ಕೊಡುವ ಮೂಲಕ ಮೋದಿಗೆ ಮತ ಹಾಕಲು ಜನರಿಗೆ ಮನವಿ ಮಾಡುತ್ತಿದ್ದಾರೆ. ವಿಶೇಷ ಅಂದ್ರೆ ಇವರ್ಯಾರು ಬಿಜೆಪಿ ಕಾರ್ಯಕರ್ತರಲ್ಲ ಅಥವಾ ಬಿಜೆಪಿ ಪಕ್ಷದವರಲ್ಲ. ಇವರೆಲ್ಲಾ ಮೋದಿ ಅಭಿಮಾನಿಗಳಂತೆ.