‘
ಕೋಲಾರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾತು ಕೇಳಿ ಶಾಸಕ ಕೆ ಶ್ರೀನಿವಾಸಗೌಡ ಕಾಂಗ್ರೆಸ್ಗೆ ಹೋದರು. ಈಗ ಅವರ ಸ್ಥಿತಿ ರಾವಣಾಸುರನ ಸ್ಥಿತಿಯಾಗಿದೆ. ರಾವಣಾಸುರನನ್ನು ಹೇಗೆ ಮುಗಿಸಬೇಕೆಂದು ಯೋಜನೆ ಇತ್ತು. ಹಾಗೆ ಶ್ರೀನಿವಾಸಗೌಡರ ಸ್ಥಿತಿ ಆಯಿತು ಎಂದು ಕೋಲಾರ ಶಾಸಕ ಕೆ ಶ್ರೀನಿವಾಸಗೌಡ ಅವರ ವಿರುದ್ಧ ಎಂಎಲ್ಸಿ ಗೋವಿಂದ ರಾಜು ವಾಗ್ದಾಳಿ ನಡೆಸಿದರು.
ಕೋಲಾರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಕುಮಾರ್ ಶಿವನ ಸ್ಥಾನದಲ್ಲಿದ್ದಾರೆ. ರಾವಣಾಸುರನ ಸ್ಥಿತಿಯಲ್ಲಿ ಶ್ರೀನಿವಾಸಗೌಡ ಇದ್ದಾರೆ. ರಾವಣಾಸುರನನ್ನು ಹೇಗೆ ಮುಗಿಸಬೇಕೆಂದು ಯೋಜನೆ ಇತ್ತು. ಹಾಗೆ ಶ್ರೀನಿವಾಸಗೌಡರ ಸ್ಥಿತಿ ಆಯಿತು ಎಂದ್ರು.
ಇನ್ನು ಶ್ರೀನಿವಾಸಪುರದ ಶಾಸಕ ರಮೇಶ್ ಕುಮಾರ್ ಅವರಿಗೆ ಹತ್ತಲ್ಲ ಎಷ್ಟು ತಲೆ ಬೇಕಾದರೂ ಇವೆ. ಸಾಮಾನ್ಯ ವ್ಯಕ್ತಿ ಅಲ್ಲ, ರಮೇಶ್ ಕುಮಾರ್ ಹಾಗೂ ಶ್ರೀನಿವಾಸಗೌಡರನ್ನು ರಾವಣನ ಕಥೆಗೆ ಹೋಲಿಕೆ ಮಾಡಿದ ಅವರು, ಮಾಡಿದ್ದುಣ್ಣೋ ಮಾರಾಯ ಗಾದೆಯಂತೆ ಶ್ರೀನಿವಾಸಗೌಡ ಅವರ ಸ್ಥಿತಿ ಆಗಿದೆ. ನಿಷ್ಠೆ ಇಲ್ಲದ ರಾಜಕಾರಣ ಯಾರೇ ಮಾಡಿದರೂ ಈ ಸ್ಥಿತಿ ಬರುತ್ತದೆ. ನಾವು ಅವತ್ತು ದಿವಾಳಿ ಆದವರನ್ನು ಕರೆತಂದು ಶಾಸಕರನ್ನಾಗಿ ಮಾಡಿದ್ದೇವೆ. ಆನಂತರ ಅವರ ಹೀಗೆ ನಡೆದುಕೊಂಡರು, ಇದು ಮನುಕುಲಕ್ಕೆ ಮಾಡಿದ ಅಪಮಾನ ಎಂದು ಗೋವಿಂದರಾಜು ಹರಿಹಾಯ್ದರು.
ಇನ್ನು ಸಿದ್ದರಾಮಯ್ಯ ಕೋಲಾರ ಸ್ಪರ್ಧೆಯಿಂದ ಹಿಂದೆ ಸರಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಅವರನ್ನು ಮನವೊಲಿಸುವ ಶಕ್ತಿ, ಈಗ ಮನೆ ಬಳಿ ಹೋಗಿರುವವರಿಗೆ ಇದೆಯಾ. ಅಲ್ಲಿ ಹೋಗಿ ನಾಟಕ ಮಾಡುತ್ತಿದ್ದಾರೆ. ಆ ನಾಟಕದ ಹಿಂದೆ ಯಾರಿದ್ದಾರೋ ಗೊತ್ತಿಲ್ಲ. ಸಿದ್ದರಾಮಯ್ಯ ಆಗಲಿ, ಯಾರೇ ಅಭ್ಯರ್ಥಿ ಆಗಲಿ.. ನಾವು ಚುನಾವಣೆ ಎದುರಿಸುತ್ತೇವೆ ಎಂದು ಗೋವಿಂದರಾಜು ಹೇಳಿದರು.
ಉರಿಗೌಡ ನಂಜೇಗೌಡ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜಕೀಯ ಬಣ್ಣ ತಿರುಗಿಸಲಾಗಿದೆ. ಬಿಜೆಪಿಯವರು ಇದನ್ನು ಎಲ್ಲಿಗೋ ತೆಗೆದುಕೊಂಡು ಹೋಗಿದ್ದಾರೆ. ನಮ್ಮ ಸಮುದಾಯದ ಮಹಾಸ್ವಾಮಿಗಳಾಗಿ ಬಿಜೆಪಿ ನಾಯಕರಿಗೆ ನಿರ್ಮಲಾನಂದ ಸ್ವಾಮೀಜಿ ಸಲಹೆ ಜೊತೆಗೆ ಕಿವಿಮಾತು ಹೇಳಿದ್ದಾರೆ. ಬಿಜೆಪಿ ಅವರು ಹಿಜಾಬ್, ಹಲಾಲ್, ಜಟ್ಕಾ ಕಟ್, ಈಗ ಉರಿಗೌಡ ನಂಜೇಗೌಡ ಎನ್ನುತ್ತಿದ್ದಾರೆ. ಅಲ್ಪಸಂಖ್ಯಾತರನ್ನು ಒಕ್ಕಲಿಗರ ಮೇಲೆ ಎತ್ತಿ ಕಟ್ಟೋದು, ಒಕ್ಕಲಿಗರನ್ನು ಅಲ್ಪಸಂಖ್ಯಾತರ ಮೇಲೆ ಎತ್ತಿ ಕಟ್ಟೋ ಕೆಲಸ ಆಗುತ್ತಿದೆ ಎಂದು ಆರೋಪಿಸಿದರು.
ಉರಿಗೌಡ, ನಂಜೇಗೌಡ ಹೆಸರಲ್ಲಿ ರಾಜಕಾರಣ ಶೋಭೆ ತರುವುದಿಲ್ಲ- ನಿಖಿಲ್ ಕುಮಾರಸ್ವಾಮಿ: ಉರಿಗೌಡ ಮತ್ತು ನಂಜೇಗೌಡ ಹೆಸರಲ್ಲಿ ರಾಜಕಾರಣ ಮಾಡುವುದರಿಂದ ಯಾರಿಗೂ ಶೋಭೆ ತರುವುದಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೋಮವಾರ ಹೇಳಿದ್ದರು. ಕೋಲಾರ ಜಿಲ್ಲೆಯ ಬಂಗಾರಪೇಟೆ ಜೆಡಿಎಸ್ ಸಮಾವೇಶದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಬಿಜೆಪಿಯವರು ಬಹಳ ಜನರನ್ನು ಜ್ಞಾಪಿಸಿಕೊಳ್ಳುತ್ತಾರೆ. ಉರಿಗೌಡ ನಂಜೇಗೌಡರ ಇತಿಹಾಸದ ಕಾಲ್ಪನಿಕ ಪಾತ್ರಗಳು ಎಂದು ಮಾಧ್ಯಮದಲ್ಲಾದ ಚರ್ಚೆಯ ಮೂಲಕ ತಿಳಿದುಕೊಂಡೆ. ಉರಿಗೌಡ ನಂಜೇಗೌಡ ಹೆಸರಲ್ಲಿ ರಾಜಕಾರಣ ಮಾಡಬಾರದು ಎಂದಿದ್ದರು.
ಬಿಜೆಪಿ ಸರ್ಕಾರವು ತನ್ನ ಆಡಳಿತದಲ್ಲಿ ಕೊಟ್ಟಿರುವ ಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಚರ್ಚೆ ಮಾಡಬೇಕು. ಆದರೆ ಆ ಪಕ್ಷದ ನಾಯಕರು ಚುನಾವಣೆ ಸಂದರ್ಭದಲ್ಲಿ ಉರಿಗೌಡ ನಂಜೇಗೌಡರ ಹೆಸರಿನಲ್ಲಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದು ನನ್ನ ಅಭಿಪ್ರಾಯದಲ್ಲಿ ಸರಿಯಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದರು.