ಕೋಲಾರ: ಸ್ಥಳೀಯ ಮುಖಂಡರೊಬ್ಬರು ತಮ್ಮ ಬಾಯಿ ಚಪಲಕ್ಕೆ ಮಹತ್ವಾಕಾಂಕ್ಷೆ ಯೋಜನೆಯಾದ ಎತ್ತಿನಹೊಳೆ ಕಾಮಗಾರಿಯ ಕ್ರೆಡಿಟ್ಅನ್ನು ತೆಗೆದುಕೊಳ್ಳುತ್ತಿದ್ದಾರೆಂದು ಪರೋಕ್ಷವಾಗಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ಗೆ ವೈದ್ಯಕೀಯ ಸಚಿವ ಸುಧಾಕರ್ ಟಾಂಗ್ ನೀಡಿದರು.
ರಮೇಶ್ ಕುಮಾರ್ ಅವರ ಹೆಸರನ್ನ ಪ್ರಸ್ತಾಪಿಸದೇ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಲ್ಲಿನ ಸ್ಥಳೀಯ ಮುಖಂಡರೊಬ್ಬರು ತಮ್ಮ ಬಾಯಿ ಚಪಲಕ್ಕಾಗಿ ಎತ್ತಿನಹೊಳೆ ಯೋಜನೆಯ ಕ್ರೆಡಿಟ್ಅನ್ನು ತೆಗೆದುಕೊಳ್ಳುವುದಕ್ಕಾಗಿ ಹೊರಟಿದ್ದಾರೆ. ಆದರೆ, ಇದರ ನಿಜವಾದ ಕನಸನ್ನ ಕಂಡಿದ್ದವರು ಆಗಿನ ಮುಖ್ಯಮಂತ್ರಿಗಳಾಗಿದ್ದ ಸದಾನಂದಗೌಡ ಎಂದು ಹೇಳುವ ಮೂಲಕ ಮಾಜಿ ಸ್ಪೀಕರ್ಗೆ ಟಾಂಗ್ ನೀಡಿದರು.
ಇನ್ನು 3 ವರ್ಷದೊಳಗೆ ಎತ್ತಿನಹೊಳೆ ಕಾಮಗಾರಿಯನ್ನ ಮುಗಿಸುವುದಕ್ಕೆ ನಾವೆಲ್ಲರೂ ಮುಖ್ಯಮಂತ್ರಿ ಬಳಿ ಮನವಿ ಮಾಡಿದ್ದೇವೆ. ಈ ಯೋಜನೆಯ ಯಶಸ್ವಿಯಿಂದ ಈ ಭಾಗದ ಪ್ರತಿಯೊಬ್ಬ ರೈತನ ಬದುಕು ಹಸನಾಗಬೇಕು. ಜೊತೆಗೆ ಬಂಗಾರದಹ ಬೆಳೆಗಳನ್ನ ಬೆಳೆಯಬೇಕೆಂದು ತಿಳಿಸಿದರು.
ಎತ್ತಿನಹೊಳೆ ಕಾಮಗಾರಿಗಾಗಿ ಬರುವಂತಹ ದಿನಗಳಲ್ಲಿ ಇನ್ನು ಹೆಚ್ಚಿನ ಅನುದಾನವನ್ನ ನೀಡಲಾಗುತ್ತದೆ. ಸಾಲದೇ ಹೋದಲ್ಲಿ ಸಾಲವನ್ನಾದರೂ ಮಾಡಿ ಕಾಮಗಾರಿಯನ್ನು ಪೂರ್ಣಗೊಳಿಸುತ್ತೇವೆ ಎಂದು ಭರವಸೆ ನೀಡಿದರು.