ಕೋಲಾರ: ಕಳೆದ ಎಂಟು ತಿಂಗಳಿಂದ ಕೊರೊನಾ ಹಿನ್ನೆಲೆ ಸ್ಥಗಿತವಾಗಿದ್ದ ಮಾರಿಕುಪ್ಪಂ- ಬೆಂಗಳೂರು ಸ್ವರ್ಣ ಪ್ಯಾಸೆಂಜರ್ ರೈಲು ಇಂದಿನಿಂದ ಮತ್ತೆ ತನ್ನ ಓಡಾಟ ಆರಂಭಿಸಿದೆ.
ಕಡಿಮೆ ದರದಲ್ಲಿ ಸಮಯಕ್ಕೆ ಸರಿಯಾಗಿ ಕರೆದೊಯ್ಯುತ್ತಿದ್ದ ಈ ರೈಲನ್ನು ಕೋವಿಡ್ ಕಾರಣದಿಂದ ನಿಲ್ಲಿಸಲಾಗಿತ್ತು. ಪರಿಣಾಮ ಕಳೆದ ಎಂಟು ತಿಂಗಳಿಂದ ಕೆಜಿಎಫ್ ಭಾಗದ ಜನರಿಗೆ ಸಾಕಷ್ಟು ತೊಂದರೆಯಾಗಿತ್ತು. ಇಂದು ಮತ್ತೆ ತನ್ನ ಓಡಾಟ ಆರಂಭಿಸಿರುವ ರೈಲಿಗೆ ಕೋಲಾರ ಸಂಸದ ಮುನಿಸ್ವಾಮಿ ಹಾಗೂ ಪ್ರಯಾಣಿಕರು ಪೂಜೆ ಮಾಡಿ ಜನರಿಗೆ ಸಿಹಿ ಹಂಚಿ ಚಾಲನೆ ನೀಡಿದರು.
ಓದಿ:'ಭಾರತ ಬಂದ್' ಕರೆಗೆ ರಾಜ್ಯದ ವಿವಿಧ ಸಂಘಟನೆಗಳ ಬೆಂಬಲ: ಸ್ತಬ್ಧವಾಗುತ್ತಾ ಕರುನಾಡು?
ಇಂದು ಸ್ವರ್ಣ ರೈಲು ಆರಂಭವಾಗುತ್ತಿದೆ ಅನ್ನೋದು ತಿಳಿಯುತ್ತಿದ್ದಂತೆ ಸಾವಿರಾರು ಸಂಖ್ಯೆಯ ಪ್ರಯಾಣಿಕರು ಮುಂಜಾನೆಯೇ ರೈಲು ನಿಲ್ದಾಣದತ್ತ ಬಂದಿದ್ರು. ರೈಲು ನಿಲ್ದಾಣದಲ್ಲಿದ್ದ ಸಂಸದ ಮುನಿಸ್ವಾಮಿ ಅಲ್ಲಿದ್ದ ಪ್ರಯಾಣಿಕರಿಗೆ ಸೋಪು ಹಾಗೂ ಮಾಸ್ಕ್ ವಿತರಣೆ ಮಾಡಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೊನಾಗೆ ಬಲಿಯಾಗದಂತೆ ಮನವಿ ಮಾಡಿದ್ರು. ಅಷ್ಟೇ ಅಲ್ಲದೆ ಮಾರಿಕುಪ್ಪಂ ನಿಂದ ಮಾಲೂರುವರೆಗೂ ಪ್ರಯಾಣ ಮಾಡಿ ಪ್ರಯಾಣಿಕರಿಗೆ ಮಾಸ್ಕ್ ವಿತರಣೆ ಮಾಡಿದ್ರು.
ಈ ವೇಳೆ ಎಂಟು ತಿಂಗಳಿಂದ ನಿಂತಿದ್ದ ರೈಲು ಮತ್ತೆ ಆರಂಭವಾಗಿದ್ದಕ್ಕೆ ಪ್ರಯಾಣಿಕರು ಸಿಹಿ ಹಂಚಿ ಸಂಭ್ರಮಿಸಿದರು. ಈ ವೇಳೆ ಮತ್ತಷ್ಟು ರೈಲುಗಳು ಆರಂಭವಾಗಿ ಎಂದಿನಂತೆ ಜನಜೀವನ ಆದಷ್ಟು ಬೇಗ ಕೊರೊನಾ ಭೀತಿಯಿಂದ ಹೊರ ಬಂದು ಯಥಾಸ್ಥಿತಿಗೆ ಮರಳಲಿ ಎಂದು ಆಶಿಸಿದರು.