ಕೋಲಾರ: ಜನರಿಗೆ ಉಪಯೋಗವಾಗಲೆಂದು ಅಂದಿನ ಖಡಕ್ ಜಿಲ್ಲಾಧಿಕಾರಿ ಡಿ.ಕೆ ರವಿ ಅವರ ಕನಿಸಿನ ಯೋಜನೆಯಾಗಿದ್ದ ‘ಕಂದಾಯ ಅದಾಲತ್’ ಇದೀಗ ಮತ್ತೆ ಜಾರಿಗೆ ಬಂದಿದೆ. ಡಿ.ಕೆ ರವಿ ಕಾಲಾವಧಿಯಲ್ಲಿ ಜನರಿಗೆ ಉಪಯೋಗವಾಗಲು ಸ್ವತಃ ರವಿಯವರೇ ಮುಂದೆ ನಿಂತು ಜಾರಿ ಮಾಡಿದ್ದ ಯೋಜನೆ ಅಂದಿನ ಸಿಎಂ ಸಿದ್ದರಾಮಯ್ಯ ಮೆಚ್ಚುಗೆಗೂ ಪಾತ್ರವಾಗಿತ್ತು. ಬಳಿಕ ರಾಜ್ಯದಾದ್ಯಂತ ಈ ಯೋಜನೆ ವಿಸ್ತರಿಸಲಾಗಿತ್ತು.
ಈ ಯೋಜನೆಯಿಂದಾಗಿ ಜನರು ಸರ್ಕಾರಿ ಕಚೇರಿಗೆ ಅನಗತ್ಯವಾಗಿ ಅಲೆದಾಡುವುದನ್ನು ಕಡಿಮೆ ಮಾಡುವ ಉದ್ದೇಶವಿತ್ತು. ಬಳಿಕ ಕೆಲ ಕಾಲ ಈ ಯೋಜನೆ ಸ್ಥಗಿತಗೊಂಡಿತ್ತು. ಆದರೆ ಇಗ ಕೋಲಾರ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಕಂದಾಯ ಅದಾಲತ್ ಆರಂಭ ಮಾಡಿದ್ದು, ಮೊದಲ ಹಂತವಾಗಿ ಹೋಬಳಿ ಮಟ್ಟದಲ್ಲಿ ಈ ಯೋಜನೆ ಆರಂಭ ಮಾಡಲಾಗಿದೆ. ಕೋವಿಡ್ ಹಿನ್ನೆಲೆ ಸರ್ಕಾರಿ ಕಚೇರಿಗೆ ಜನರ ಓಡಾಟ ಕಡಿಮೆ ಮಾಡಲು ಈ ಯೋಜನೆ ಜಾರಿ ಮಾಡಲಾಗುತ್ತಿದ್ದು, ಸದ್ಯ ಪಿಂಚಣಿಗೆ ಸಂಬಂಧಿಸಿದ ದೂರು ಹಾಗೂ ಪಹಣಿ ಸಂಬಂಧ ದೂರುಗಳನ್ನು ಒಂದು ತಿಂಗಳ ಅವದಿಯಲ್ಲಿ ಅತ್ಯರ್ಥ ಪಡಿಸಲಾಗುತ್ತಿದೆ.
ಜಮೀನು ವ್ಯಾಜ್ಯಾಗೆ ಸಂಬಂಧಪಟ್ಟಂತೆ ಹಲವು ವಿವಾದಗಳು ಇರುವ ಕಾರಣ ಈಗ ಕೇವಲ ವೃದ್ಧರು, ವಿಧವೆಯರು ಹಾಗೂ ಅಂಗವಿಕಲರಿಗೆ ಅನುಕೂಲವಾಗುವ ರೀತಿಯಲ್ಲಿ ಜೊತೆಗೆ ಪಹಣಿಯ ತಿದ್ದುಪಡಿ ಮಾತ್ರ ಮಾಡಲಾಗುತ್ತಿದೆ. ಇದರಿಂದ ಕೆಲವೇ ಕೆಲವು ಜನರ ಸಮಸ್ಯೆ ಮಾತ್ರ ಬಗೆಹರಿಯುತ್ತಿದೆ. ಆದರೆ ಕಂದಾಯ ಅದಾಲತ್ ಜೊತೆಗೆ ಕಚೇರಿ ಅದಾಲತ್ ಮಾಡಿ ಕಚೇರಿಗಳಲ್ಲಿ ವರ್ಷಗಳಿಂದ ಬಾಕಿ ಇರುವ ಕಡತಗಳನ್ನು ವಿಲೇವಾರಿ ಮಾಡಿದಲ್ಲಿ ಇನ್ನೂ ಅನುಕೂಲವಾಗುತ್ತದೆ ಎನ್ನುವುದು ಕೆಲವು ಸ್ಥಳೀಯರ ಮಾತಾಗಿದೆ.
ಒಟ್ಟಾರೆ ದಕ್ಷ ಅಧಿಕಾರಿಯಾಗಿದ್ದ ದಿವಂಗತ ಡಿ.ಕೆ.ರವಿಯವರ ಕನಸಿನ ಯೋಜನೆಯನ್ನು ಜಿಲ್ಲೆಯಲ್ಲಿ ಮತ್ತೆ ಜಾರಿಗೆ ತರುವ ಮೂಲಕ ಮತ್ತೆ ಅವರ ನೆನಪು ಮರುಕಳಿಸಿದೆ.