ಕೋಲಾರ: ಸಿದ್ದರಾಮಯ್ಯ ಒಬ್ಬ ಸಮರ್ಥವಾದ ಸಿಎಂ ಆಗಿದ್ದರು. ಪಕ್ಷಾತೀತವಾಗಿ ಎಲ್ಲಾ ಪಕ್ಷದ ಶಾಸಕರು ಸಿದ್ದರಾಮಯ್ಯರನ್ನ ಮೆಚ್ಚಿದ್ದಾರೆ. ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ಜನಪ್ರಿಯತೆ ಇಲ್ಲ ಎಂದಲ್ಲ. ದೇವರಾಜು ಅರಸು, ಎಸ್.ಎಂ. ಕೃಷ್ಣ, ಧರ್ಮಸಿಂಗ್ ಸರ್ಕಾರ ಇದ್ದಾಗಲು ಚುನಾವಣೆಯಲ್ಲಿ ಸೋತಿದ್ದೇವೆ ಎಂದು ಹೇಳುವ ಮೂಲಕ ಮಾಜಿ ಸಿಎಂ ಪರ ಸಚಿವ ಕೃಷ್ಣಬೈರೇಗೌಡ ಬ್ಯಾಟಿಂಗ್ ಮಾಡಿದರು.
ಇಂದು ಕೋಲಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಬರ ಪರಿಶೀಲನೆ ಸಭೆ ನಂತರ ಸಚಿವ ಕೃಷ್ಣಬೈರೇಗೌಡ ಮಾಜಿ ಸಿಎಂ ಸಿದ್ದರಾಮಯ್ಯ ಪರ ಮಾತನಾಡಿದರು. ಈ ಮೂಲಕ ಪರೋಕ್ಷವಾಗಿ ಜೆಡಿಎಸ್ ರಾಜ್ಯಾಧ್ಯಕ್ಷ್ಯ ಎಚ್.ವಿಶ್ವನಾಥ್ ವಿರುದ್ಧ ವಾಗ್ದಾಳಿ ನಡೆಸಿದರು. ಹೌದು ಇತ್ತೀಚೆಗಷ್ಟೆ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿಸ್ಥಾನದ ಕುರಿತು ವಿಶ್ವನಾಥ್ ನೀಡಿದ್ದ ಹೇಳಿಕೆಗಳಿಗೆ ಟಾಂಗ್ ನೀಡಿದ ಅವರು, ಕೆಲವರು ಮಾತನಾಡುವ ಮೊದಲು ಶಿಸ್ತಿನ ಪದಬಳಕೆ ಅತ್ಯವಶ್ಯಕ. ಸಾರ್ವಜನಿಕವಾಗಿ ನಾವು ಮಾತನಾಡುವಾಗ ಸದಬಿರುಚಿ ಪದಬಳಕೆ ಅತಿಮುಖ್ಯ ಎಂದರು.
ಇನ್ನೂ ಫಲಿತಾಂಶ ಕುರಿತು, ಲೋಕಸಭೆ ಚುನಾವಣೆಯಲ್ಲಿ ಏನೇ ಫಲಿತಾಂಶ ಬಂದರೂ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಸಮಸ್ಯೆಯಿಲ್ಲ. ಕೇಂದ್ರದಲ್ಲಿ ಈ ಬಾರಿ ವಿರೋಧ ಪಕ್ಷದ ಸರ್ಕಾರ ರಚನೆಯಾಗೋದು ಖಚಿತ ಎಂದರು.