ಕೋಲಾರ : ತಾಲೂಕಿನ ತೂರಾಂಡಹಳ್ಳಿ ಗ್ರಾಮದ ಬಳಿ ಇರುವ ರೈಲ್ವೆ ನಿಲ್ದಾಣ ಇನ್ನೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ತೂರಾಂಡಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಕೋಲಾರ ಹಾಗೂ ಶ್ರೀನಿವಾಸಪುರ ರೈಲ್ವೆ ಮಾರ್ಗ ಮಧ್ಯೆ ಬರುವ ರೈಲು ನಿಲ್ದಾಣಕ್ಕೆ ಮೊದಲಿಗೆ ದೂರದಲ್ಲಿರುವ ಗೊಟ್ಟಹಳ್ಳಿ ರೈಲ್ವೆ ನಿಲ್ದಾಣ ಎಂದು ನಾಮಕರಣ ಮಾಡಲು ಮುಂದಾಗಿತ್ತು.
ಆದರೆ, ತೂರಾಂಡಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ರೈಲು ನಿಲ್ದಾಣಕ್ಕೆ ತೂರಾಂಡಹಳ್ಳಿ ಎಂದು ನಾಮಕರಣ ಮಾಡಬೇಕು ಎಂಬ ವಿಚಾರದಲ್ಲಿ 6 ವರ್ಷದ ಹಿಂದೆ ಬಂದ 2 ಗ್ರಾಮಗಳ ನಡುವೆ ಉಂಟಾಗಿದ್ದ ವಿವಾದಿಂದಾಗಿ ಇಂದಿಗೂ ರೈಲ್ವೆ ನಿಲ್ದಾಣ ಉದ್ಘಾಟನೆ ಭಾಗ್ಯ ಕಂಡಿಲ್ಲ.
ಈ ರೈಲ್ವೆ ನಿಲ್ದಾಣದಲ್ಲಿ ಶೌಚಾಲಯ, ಕುಡಿವ ನೀರಿನ ವ್ಯವಸ್ಥೆ, ಪ್ರಯಾಣಿಕರಿಗಾಗಿ ಆಸನದ ವ್ಯವಸ್ಥೆ, ಗ್ರಾಮದಿಂದ ರೈಲ್ವೆ ನಿಲ್ದಾಣಕ್ಕೆ ಬರಲು ಸ್ಕೈವಾಕ್, ಟಿಕೆಟ್ ಕೌಂಟರ್ ಸೇರಿ ಮೇಜು, ಕುರ್ಚಿಗಳಷ್ಟೇ ಅಲ್ಲ, ಉಪಕರಣಗಳು ಸೇರಿ ಸಕಲ ವ್ಯವಸ್ಥೆ ಇದೆ.
ಡಿಜಿಟಲ್ ಆಕ್ಸೆಲ್ ಕೌಂಟರ್, ರಿಸೆಟ್ ಬಾಕ್ಸ್, ಸಿಗ್ನಲ್ ಪೋಸ್ಟ್ ಟೆಲಿಫೋನ್, ಟೋಕನ್ಲೆಸ್ ಬ್ಲಾಕ್ ಇನ್‌ಸ್ಟ್ರುಮೆಂಟ್, ಟ್ರ್ಯಾಕ್ ಹ್ಯಾಂಡಲ್ ಸೇರಿ ಕೋಟ್ಯಂತರ ರೂಪಾಯಿಯ ಎಲ್ಲ ಉಪಕರಣಗಳಿವೆ. ರಿಲೇ ಕೊಠಡಿ, ಯುಪಿಎಸ್ ಕೊಠಡಿ, ಜನರೇಟರ್ ಕೊಠಡಿಗಳು ಇಲ್ಲಿದ್ದು, ಅದರೊಳಗೆ ಬೇಕಾದ ಎಲ್ಲಾ ಉಪಕರಣಗಳಿವೆ. ಅವೆಲ್ಲವೂ ಇದೀಗ ಧೂಳು ಮಯವಾಗಿವೆ.
ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರು ರೈಲ್ವೆ ಸಚಿವರಾಗಿದ್ದ ವೇಳೆ ರೈಲು ಸಂಚಾರಕ್ಕೆ ಚಾಲನೆ ನೀಡಲಾಗಿದೆ. ಕೋಲಾರದಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಕೋಲಾರಕ್ಕೆ ಬರುವ ರೈಲು ದಿನಕ್ಕೆ ಎರಡು ಬಾರಿ ಈ ನಿಲ್ದಾಣಕ್ಕೆ ಬರುತ್ತದೆ. ಆದ್ರೆ, ಸ್ಥಳೀಯ ಜನಪ್ರತಿನಿಧಿಗಳು, ಕೆಲ ರೈಲ್ವೆ ಇಲಾಖೆ ಅಧಿಕಾರಿಗಳ ನಿಲ್ದಾಣಕ್ಕೆ ಹೆಸರಿಡುವ ವಿಚಾರದಲ್ಲಿ ಮಾಡಿದ ಎಡವಟ್ಟು ನಿಲ್ದಾಣವನ್ನು ಇಲಾಖೆ ನಿರ್ಲ್ಯಕ್ಷತನದಿಂದ ನೋಡುವಂತೆ ಮಾಡಿತ್ತು.
ಆದರೆ, ಒಂದು ವರ್ಷದ ಹಿಂದೆ ಆ ಹೆಸರಿನ ವಿವಾದಕ್ಕೂ ತೆರೆ ಎಳೆದು ತೊರಾಂಡಹಳ್ಳಿ ರೈಲು ನಿಲ್ದಾಣ ಎಂದು ಹೆಸರಿಟ್ಟಾಗಿದೆ. ಆದರೂ ರೈಲ್ವೆ ಇಲಾಖೆ ಅಧಿಕಾರಿಗಳು ಮಾತ್ರ ಈ ರೈಲು ನಿಲ್ದಾಣವನ್ನು ಲೋಕಾರ್ಪಣೆ ಮಾಡಲು ಹಿಂದೇಟು ಹಾಕುತ್ತಿರುವ ಕಾರಣ ಸುಸಜ್ಜಿತ ರೈಲು ನಿಲ್ದಾಣ ಅನೈತಿಕ ಚಟುವಟಿಕೆಗಳ ಹಾಗೂ ಕುಡುಕರ ಅಡ್ಡೆಯಾಗಿದೆ.
ನಿಲ್ದಾಣದಲ್ಲಿ ಟಿಕೆಟ್ ನೀಡುವವರು ಇಲ್ಲ. ಸ್ಟೇಷನ್ ಮಾಸ್ಟರ್, ಸಿಬ್ಬಂದಿಯೂ ಇಲ್ಲಿಲ್ಲ. ಹಾಗಾಗಿ, ಜನರು ರೈಲಿನಲ್ಲಿ ಪ್ರಯಾಣ ಮಾಡೋದಕ್ಕೂ ಬರೋದಿಲ್ಲ. ಆದರೆ, ರೈಲು ನಿಲ್ದಾಣಕ್ಕೆ ಬೇಕಾದ ವ್ಯವಸ್ಥೆ ಮಾಡಿದ್ದೇ ಆದಲ್ಲಿ ಈ ಭಾಗದ ಸುಮಾರು 20 ರಿಂದ 30 ಹಳ್ಳಿಗಳ ಜನರಿಗೆ ಪ್ರಯಾಣ ಮಾಡೋದಕ್ಕೆ ಅನುಕೂಲವಾಗುತ್ತದೆ ಅಂತಾ ಸ್ಥಳೀಯರು.
ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಾಣ ಮಾಡಿರುವ ಸುಸಜ್ಜಿತ ರೈಲು ನಿಲ್ದಾಣವನ್ನು ರೈಲ್ವೆ ಇಲಾಖೆ ಕುಡುಕರ, ಅನೈತಿಕ ಚಟುವಟಿಕೆಗಳ ಪಾಲಿಗೆ ಬಿಟ್ಟು ಕೊಟ್ಟಿರುವುದು ಇಲಾಖೆ ನಿರ್ಲ್ಯಕ್ಷಕ್ಕೆ ಹಿಡಿದ ಕೈಗನ್ನಡಿ.
ಓದಿ: ಸಂಕಷ್ಟಕ್ಕೆ ಸಿಲುಕಿದೆ ಚನ್ನಪಟ್ಟಣ ಬೊಂಬೆ ಉದ್ಯಮ: ಕೈಹಿಡಿದು ಮೇಲೆತ್ತಬೇಕಿದೆ ಸರ್ಕಾರ