ಕೋಲಾರ : ಕೇರಳದ ಐತಿಹಾಸಿಕ ಶ್ರೀಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ನೆಲಮಾಳಿಗೆ ಸಂಪತ್ತು, ದೇಗುಲದ ಆಸ್ತಿ ಹಕ್ಕು ಇಡೀ ದೇಶದ ಗಮನ ಸೆಳೆದ ಪ್ರಕರಣ. ದೇಗುಲವು ತಿರುವಾಂಕೂರು ರಾಜ ಮನೆತನದ ಸುಪರ್ದಿಗೆ ಸೇರಿದ್ದಾಗಿದೆ ಎಂದು ಸುಪ್ರೀಂಕೋರ್ಟ್ ಜಸ್ಟೀಸ್ ಯು ಯು ಲಲಿತ್ ಹಾಗೂ ಮಲ್ಹೋತ್ರ ಅವರಿದ್ದ ನ್ಯಾಯಪೀಠವು ತೀರ್ಪುಸಹ ಪ್ರಕಟಿಸಿದೆ.
ಅನಂತ ಪದ್ಮನಾಭ ಸ್ವಾಮಿ ದೇಗುಲದ ನೆಲಮಾಳಿಗೆಯಲ್ಲಿರುವ ಆರು ರಹಸ್ಯ ಕೊಠಡಿಗಳ ಪೈಕಿ ಐದು ಕೊಠಡಿಗಳನ್ನು ತೆರೆಯಲಾಗಿದೆ. ಐದು ಕೊಠಡಿಯಲ್ಲಿ ಸಿಕ್ಕಿರುವ ಸಂಪತ್ತು ಎಲ್ಲರನ್ನೂ ಬೆರಗುಗೊಳಿಸಿದೆ. ಆದ್ರೀಗ ಆರನೇ ಕೊಠಡಿ ಓಪನ್ ಮಾಡೋದಕ್ಕೆ ರಾಯಲ್ ಫ್ಯಾಮಿಲಿ(ರಾಜ ಮನೆತನ) ಅವರಿಂದ ತೊಡಕು ಉಂಟಾಗಿದೆ.
ಯಾರು ಆ ನಾಗರ ರಕ್ಷಣೆಯಲ್ಲಿರುವ ಬಾಗಿಲು ತೆಗೆಯುತ್ತಾರೋ ಅಂತವರ ವಂಶ, ಮನೆತನವೇ ಸರ್ವನಾಶವಾಗುತ್ತೆ ಅನ್ನೋ ಮಾತುಗಳು ಬಲವಾಗಿ ಹರಿದಾಡುತ್ತಿವೆ. ಹೀಗಾಗಿ ಸುಮಾರು 150 ವರ್ಷಗಳಿಂದ ರಹಸ್ಯವಾಗಿರೋ ಈ ಸಂಪತ್ತು ಏನು, ಎಷ್ಟು ಮೌಲ್ಯದ್ದು ಅನ್ನೋ ಕುತೂಹಲ ಇನ್ನು ಕಾಪಾಡಿಕೊಂಡು ಬಂದಿದೆ. ಇನ್ನು ಎಷ್ಟೇ ಒತ್ತಡ ಬಂದ್ರೂ ಸಹ ಆರನೇ ಸಂಖ್ಯೆಯ ಕೊಠಡಿಯನ್ನು ತೆಗೆಯೋದಕ್ಕೆ ರಾಜ ಮನೆತನದವರ ಒಪ್ಪಿಗೆ ಸಿಗ್ತಿಲ್ಲ.
ಓದಿ-ರಾಜಾಹುಲಿ ಆಡಳಿತಕ್ಕೆ ಚಾಣಕ್ಯ ಮೆಚ್ಚುಗೆ: ಭಿನ್ನಮತೀಯರಿಗೆ 'ಶಾ' ಸಂದೇಶ ರವಾನೆ..!
ಆದ್ರೆ, ಕೋಲಾರ ಜಿಲ್ಲೆಯ ಮುಳಬಾಗಿಲು ಮೂಲದ ಕೇಶವ ಪ್ರಸಾದ್ ರಾವ್ ಎಂಬುವರು ನಾನು ಈ ಸಾಹಸಕ್ಕೆ ಕೈ ಹಾಕುತ್ತೇನೆ, ನನಗೆ ದೈವಿ ಬಲವಿರೋದ್ರಿಂದ ಆರಾಮಾಗಿ ಆ ಬಾಗಿಲು ತೆಗೆಯುತ್ತೇನೆ, ಅದರಲ್ಲಿರುವ ಹಣ, ಸಂಪತ್ತು ಸಹ ಯಾವುದು ನನಗೆ ಬೇಡ. ಕೇವಲ ಬಾಗಿಲು ತೆಗೆಯೋಕೆ ಮಾತ್ರ ಅನುಮತಿ ಕೊಡಿಸಿ ಎಂದು ಸುಪ್ರೀಂಕೋರ್ಟ್ಗೆ ಎರಡು ವರ್ಷಗಳ ಹಿಂದೆಯೇ ಹಸ್ತಕ್ಷೇಪ ಅರ್ಜಿಯನ್ನು ಸಲ್ಲಿಸಿದ್ದಾರೆ.
ಆರನೇ ಕೊಠಡಿ ನಾಗಬಂಧನ ಇರೋದ್ರಿಂದ ನನಗೆ ತಿಳಿದಿರೋ ಗರುಡ ಬಂಧನ ಪ್ರಯೋಗದಿಂದ ಬಾಗಿಲು ತೆಗೆದು ಕೊಡುತ್ತೇನೆ. ಆಮೇಲೆ ಬೇಕಾದ್ರೆ ನೀವು ಅಲ್ಲಿರೋ ಸಂಪತ್ತನ್ನು ಬಳಸಿಕೊಳ್ಳಿ ಎಂದು ತಾವು ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಆದ್ರೆ, ಈವರೆಗೂ ಸುಪ್ರೀಂಕೋರ್ಟ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಈ ಕಾರಣಕ್ಕಾಗಿ ಮಾಧ್ಯಮಗಳ ಮೂಲಕ ಸುಪ್ರೀಂಕೋರ್ಟ್ಗೆ ಮತ್ತೊಮ್ಮೆ ಮನವಿ ಮಾಡಿಕೊಡಲು, ಕೆಜಿಎಫ್ನಲ್ಲಿ ಇಂದು ಪ್ರೆಸ್‌ಮೀಟ್ ಮಾಡಿದ್ರು. ಮೂಲತಃ ಕೋಲಾರದಲ್ಲಿ ಆಡಿಟಿಂಗ್ ಕೆಲಸ ಮಾಡುತ್ತಿರುವ ಕೇಶವ ಪ್ರಸಾದ್ ರಾವ್, 11 ವರ್ಷಗಳಿಂದ ವಿಶೇಷ ಪೂಜೆ ಮಾಡಿ ದೈವಿಕ ಶಕ್ತಿ ಪಡೆದುಕೊಂಡಿದ್ದಾರಂತೆ. ಒಂದು ವೇಳೆ ಬಾಗಿಲು ತೆಗೆದ ಬಳಿಕ ನನಗೆ ಸಾವು ಸಂಭವಿಸಿದ್ರೆ, ಯಾರು ಜವಾಬ್ದಾರರಲ್ಲ ಅಂತಾನೂ ಹಾಕಿರೋ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ರಹಸ್ಯವಾಗಿರುವ ದೈವಸಂಪತ್ತನ್ನು ಬಯಲಿಗೆಳೆಯುವ ಸಾಹಸಕ್ಕೆ ಮುಂದಾಗಿರುವ ಕೇಶವ ಪ್ರಸಾದ್ ರಾವ್ ಅವರ ಅರ್ಜಿಗೆ ಸುಪ್ರೀಂಕೋರ್ಟ್ ಏನು ತೀರ್ಮಾನ ನೀಡುತ್ತೋ ಅಂತಾ ಕಾಯ್ದು ನೋಡಬೇಕಿದೆ.