ಕೋಲಾರ : ನವೆಂಬರ್ 25. ಅವತ್ತು ಮಾಜಿ ಸಚಿವ ವರ್ತೂರು ಪ್ರಕಾಶ್ ಅವರನ್ನು ತಮ್ಮ ಬೆಗ್ಲಿಹೊಸಹಳ್ಳಿ ಫಾರ್ಮ್ ಹೌಸ್ನಿಂದ ಬೆಂಗಳೂರಿಗೆ ಹೋಗುವ ಮಾರ್ಗಮಧ್ಯೆ ಎಂಟು ಜನರ ತಂಡ ಕಾರು ಅಡ್ಡಗಟ್ಟಿ ಕಿಡ್ನ್ಯಾಪ್ ಮಾಡಿತ್ತು.
ಈ ವೇಳೆ, ಮುಖಕ್ಕೆ ಮಂಕಿಕ್ಯಾಪ್ ಧರಿಸಿದ್ದ ಅಪಹರಣಕಾರರು ಚಿಂತಾಮಣಿ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ₹30 ಕೋಟಿಗೆ ಬೇಡಿಕೆ ಇಟ್ಟಿದ್ದರು. ವರ್ತೂರು ಪ್ರಕಾಶ್ ತಮ್ಮಲ್ಲಿ ಹಣವಿಲ್ಲ ಎಂದಾಗ ಎರಡು ದಿನಗಳ ಕಾಲ ಚಿತ್ರಹಿಂಸೆ ನೀಡಿ, ಹಲ್ಲೆ ನಡೆಸಿದ್ದಾರೆ.
ಡ್ರೈವರ್ ಸುನಿಲ್ ಮೇಲೂ ಹಲ್ಲೆ ನಡೆಸಿದ್ದರಿಂದ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದರು. ಆದ್ರೆ, ಇದಾದ ಬಳಿಕ ಸುನಿಲ್ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದ. ನಂತರ ಹಣ ಕೊಡದಿದ್ದರೆ ಪ್ರಕಾಶ್ರನ್ನು ಬಿಡಲ್ಲ ಎಂದು ಅವರ ಆಪ್ತ ನಯಾಜ್ ಎಂಬುವನಿಗೆ ಅಪಹರಣಕಾರರು ಕಾಲ್ ಮಾಡಿದ್ದಾರೆ. ಬಳಿಕ ಅವರ ಕುಟುಂಬಸ್ಥರು ನಯಾಜ್ಗೆ ನರಸಾಪುರ ಕಾಫಿಡೇ ಬಳಿ 40 ಲಕ್ಷ ರೂಪಾಯಿ ಕೊಟ್ಟು ಕಳಿಸಿದ್ದಾರೆ.
ಆ ವೇಳೆಗೆ ವರ್ತೂರು ಪ್ರಕಾಶ್, ನನ್ನ ಬಳಿ ಹಣವಿಲ್ಲ. ಎಲೆಕ್ಷನ್ನಲ್ಲಿ ಎಲ್ಲ ಹಣ ಕಳೆದುಕೊಂಡಿರುವುದಾಗಿ ಹೇಳಿದ್ದರಿಂದ ಅವರನ್ನು ಬಿಟ್ಟು ಕಳಿಸಿದ್ದಾರೆ. ಹೀಗಂತ ವರ್ತೂರು ಪ್ರಕಾಶ್ ಬೆಳ್ಳಂದೂರು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಘಟನೆ ವಿವರಿಸಿದ್ದಾರೆ. ಎರಡು ದಿನಗಳ ನಂತರ ಕಿಡ್ನ್ಯಾಪರ್ಸ್ ವರ್ತೂರ್ ಪ್ರಕಾಶ್ ಅವರನ್ನು ಹೊಸಕೋಟೆ ಬಳಿ ಬೆಳಗ್ಗಿನ ಜಾವ ಬಿಟ್ಟು ಹೋಗಿದ್ದಾರೆ.
ಮೈಮೇಲೆ ಬಟ್ಟೆ ಇಲ್ಲದೆ ಸಾಕಷ್ಟು ಗಾಯಗೊಂಡಿದ್ದ ವರ್ತೂರು, ಹೆದ್ದಾರಿಯಲ್ಲಿ ಕಾರೊಂದನ್ನು ಅಡ್ಡ ಹಾಕಿ, ಅಣ್ಣಾ ನಾನು ವರ್ತೂರು ಪ್ರಕಾಶ್ ಎಂದು ಹೇಳಿಕೊಂಡ ಮೇಲೆ ಅಲ್ಲಿದ್ದ ಜನರು ಬಟ್ಟೆ ಕೊಟ್ಟು ಅವರನ್ನು ಸತ್ಯಸಾಯಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರಂತೆ.
ಬಳಿಕ ಅವರ ಮಗ ಅವರಿದ್ದ ಆಸ್ಪತ್ರೆಗೆ ಭೇಟಿ ನೀಡಿ ಬಳಿಕ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಇದಾದ ಎರಡು ದಿನಗಳ ನಂತರ ಅವರ ಕಾರು ಬೆಂಗಳೂರಿನ ಬೆಳ್ಳಂದೂರು ಬಳಿ ಪತ್ತೆಯಾಗಿದೆ. ಕಾರಿನಲ್ಲಿ ಖಾರದ ಪುಡಿ ಜೊತೆಗೆ ಒಂದು ಹುಡುಗಿಯ ದುಪ್ಪಟ್ಟ ಕೂಡ ಸಿಕ್ಕಿದೆ.
ಕಾರು ಪತ್ತೆಯಾದ ನಂತರ ವರ್ತೂರು ಪ್ರಕಾಶ್ ಕಿಡ್ನ್ಯಾಪ್ ಕಹಾನಿ ಬೆಳಕಿಗೆ ಬಂದಿದೆ. ಜೊತೆಗೆ ಸ್ವತ: ವರ್ತೂರು ಪ್ರಕಾಶ್ ಬೆಳ್ಳಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಲ್ಲದೆ ಕಿಡ್ನ್ಯಾಪರ್ಸ್ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ರೆ, ಕೊಲೆ ಮಾಡುವುದಾಗಿ ಮಾಜಿ ಸಚಿವರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಆದ್ರೆ, ಈ ಪ್ರಕರಣದ ಸುತ್ತ ಸಾಕಷ್ಟು ಅನುಮಾನಗಳು ಸೃಷ್ಠಿಯಾಗಿವೆ. ಪ್ರಕರಣ ದಾಖಲಿಸಿಕೊಂಡಿರುವ ಕೋಲಾರ ಗ್ರಾಮಾಂತರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.