ಕೋಲಾರ : ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ನಗರದ ಕೀಲುಕೋಟೆ ಬಳಿಯಿರುವ ರೈಲ್ವೆ ಅಂಡರ್ ಪಾಸ್ ತುಂಬಾ ನೀರು ತುಂಬಿಕೊಂಡಿದ್ದು, ವಾಹನ ಸವಾರರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಅಂಡರ್ ಪಾಸ್ ಕೆಳಗೆ ನೀರು ತುಂಬಿಕೊಂಡು ಕೆರೆಯಂತಾಗಿದೆ. ಈ ರಸ್ತೆ ಮಾರ್ಗವಾಗಿ ಓಡಾಡುವ ಸ್ಥಳೀಯರು, ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗಿದೆ. ಕೋಲಾರದ ನಗರದಿಂದ ಕೀಲುಕೋಟೆ ಮಾರ್ಗವಾಗಿ ವಿವಿಧ ಗ್ರಾಮಗಳಿಗೆ ತೆರೆಳುವ ಮಾರ್ಗಮಧ್ಯೆದಲ್ಲಿರುವ ರೈಲ್ವೆ ಅಂಡರಪಾಸ್ ಇದಾಗಿದೆ. ಕಳೆದ ಎಂಟು ವರ್ಷಗಳಿಂದಲೂ ಜನರು ಇದೇ ತೊಂದರೆ ಅನುಭವಿಸುತ್ತಿದ್ದಾರೆ.
ಕಳೆದ ಬಾರಿ ಸುರಿದ ಮಳೆಯಿಂದಾಗಿ ಈ ಅಂಡರ್ ಪಾಸ್ನಲ್ಲಿ ಇನ್ನೋವಾ ಕಾರೊಂದು ನೀರಿನಲ್ಲಿ ಮುಳುಗಡೆಯಾಗಿದೆ. ಕಾರಿನಲ್ಲಿದ್ದವರು ಗಾಜು ಒಡೆದು ಹೊರ ಬಂದು ತಮ್ಮ ಪ್ರಾಣ ಉಳಿಸಿಕೊಂಡಿದ್ದರು. ಇದೇ ಮಾರ್ಗ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಮಳೆಗಾಲದಲ್ಲಿ ಶಾಲಾ ಮಕ್ಕಳು, ರೋಗಿಗಳು ಹಾಗೂ ಸಾರ್ವಜನಿಕರು ಓಡಾಡಲು ಸಮಸ್ಯೆಯಾಗುತ್ತಿದೆ.
ಮಳೆಗಾಲದಲ್ಲಿ ಈ ರೈಲ್ವೆ ಅಂಡರ್ ಪಾಸ್ ಮೃತ್ಯುಕೂಪವಾಗಿ ಪರಿಣಮಿಸಿದೆ. ಸಂಬಂಧಪಟ್ಟ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವಂತೆ ಹಲವು ಬಾರಿ ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದ್ರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸಮಸ್ಯೆಯನ್ನು ಸರಿಪಡಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಾಗಿದೆ.
ಇದನ್ನೂ ಓದಿ:ಶಾಸಕ ಎಂಪಿ ರೇಣುಕಾಚಾರ್ಯಗೆ ಅಭಿನಂದನೆ ಸಲ್ಲಿಸಿದ ರಾಜೇಶ್ ಕೃಷ್ಣನ್