ಕೋಲಾರ : ಕೆ ಸಿ ವ್ಯಾಲಿ ನೀರು ಕದಿಯುತ್ತಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ನಗರದ ತಹಶೀಲ್ದಾರ್ ಶೋಭಿತ ಎಚ್ಚರಿಕೆ ನೀಡಿದರು.
ಇತ್ತೀಚೆಗೆ ಕೆ ಸಿ ವ್ಯಾಲಿ ನೀರು ಹರಿಯುವ ಕಾಲುವೆಗಳ ಸಮೀಪ ಅಕ್ರಮ ಪೈಪ್ ಲೈನ್‌ಗಳನ್ನು ಅಳವಡಿಸಿ ನೀರನ್ನ ಕದಿಯಲಾಗುತ್ತಿದ್ದ ಹಿನ್ನೆಲೆ ಇಂದು ತಹಶೀಲ್ದಾರ್ ಶೋಭಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತಾಲೂಕಿನ ತಿಪ್ಪೇನಹಳ್ಳಿ ಗ್ರಾಮದ ಬಳಿ ಕೆ ಸಿ ವ್ಯಾಲಿ ನೀರು ಹರಿಯುವ ಕಾಲುವೆಯಿಂದ ಸುಮಾರು 8 ಕಿ.ಮೀ ಅಕ್ರಮ ಪೈಪ್‌ಲೈನ್ ಅಳವಡಿಸಿ ನೀರು ಕದಿಯಲಾಗುತ್ತಿದೆ ಎಂದು ಸ್ಥಳೀಯರು ತಹಶೀಲ್ದಾರ್ ಅವರಿಗೆ ದೂರು ನೀಡಿದ್ದರು.
ಈ ಹಿನ್ನೆಲೆ ಇಂದು ಸ್ಥಳಕ್ಕೆ ತಹಶೀಲ್ದಾರ್ ಭೇಟಿ ನೀಡಿದ್ದ ವೇಳೆ ತಾಲೂಕಿನ ಸೀತಿ ಹೊಸೂರು, ತಿಪ್ಪೇನಹಳ್ಳಿ ಗ್ರಾಮಗಳ ಸಮೀಪ ಕೆಸಿ ವ್ಯಾಲಿ ನೀರನ್ನ ಅಕ್ರಮ ಪೈಪ್‌ಗಳನ್ನ ಅಳವಡಿಕೆ ಮಾಡಿ ಕದಿಯುತ್ತಿದ್ದ ದೃಶ್ಯ ಕಂಡು ಬಂತು. ಸ್ಥಳ ಪರಿಶೀಲನೆ ನಡೆಸಿದ ತಹಶೀಲ್ದಾರ್ ಕೆಸಿವ್ಯಾಲಿ ನೀರು ಕದಿಯುತ್ತಿದ್ದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಕಳೆದ ಒಂದು ತಿಂಗಳ ಹಿಂದೆ ಸಣ್ಣ ನೀರಾವರಿ, ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ನೀರು ಕದಿಯುತ್ತಿದ್ದವರಿಗೆ ಎಚ್ಚರಿಕೆ ನೀಡುವುದರೊಂದಿಗೆ, ಅಕ್ರಮವಾಗಿ ಅಳವಡಿಸಿದ್ದ ಮೋಟಾರ್ ಪಂಪುಗಳನ್ನ ವಶಪಡಿಸಿಕೊಂಡಿದ್ದರು.
ಜೊತೆಗೆ ಕೆ ಸಿ ವ್ಯಾಲಿ ನೀರು ಕದಿಯುವುದನ್ನ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕೆಸಿವ್ಯಾಲಿ ನೀರು ಕದಿಯುವುದನ್ನ ನಿಲ್ಲಿಸುವುದಕ್ಕೆ ಟಾಸ್ಕ್‌ಫೋರ್ಸ್ ಸಮಿತಿಯನ್ನ ಸಹ ನಿಯೋಜನೆ ಮಾಡಲಾಗಿತ್ತು. ಆದರೂ ಕೆಸಿವ್ಯಾಲಿ ನೀರು ಕದಿಯುವುದನ್ನ ನಿಲ್ಲಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಅನ್ನೋದು ಸ್ಥಳೀಯರ ಮಾತು. ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಕೋಲಾರ ಜಿಲ್ಲೆಯ 126 ಕೆರೆಗಳಿಗೆ ಹರಿಸುವ ಕೆಸಿವ್ಯಾಲಿ ಯೋಜನೆ ಇದಾಗಿದೆ.