ಕೋಲಾರ: ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುತ್ತಿರುವ ಕ್ರಮ ಖಂಡಿಸಿ ನಾಳೆ ರಾಜ್ಯಾದ್ಯಂತ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಕೋಲಾರದಲ್ಲಿ ಪ್ರಗತಿಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
ನಾಳೆ ಬಂದ್‌ಗೆ ಎಲ್ಲ ವರ್ಗದ ಜನರು ಸಹಕಾರ ನೀಡಬೇಕೆಂದು ಪ್ರಗತಿಪರ ಸಂಘಟನೆಗಳು ಕೋಲಾರದಲ್ಲಿ ಬೈಕ್ ರ್ಯಾಲಿ ಮೂಲಕ ಜಾಗೃತಿ ಮೂಡಿಸಿದರು. ಕೋಲಾರದ ಗಾಂಧಿ ವನದಿಂದ ಆರಂಭವಾದ ಬೈಕ್ ರ್ಯಾಲಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಂದ್ ಬೆಂಬಲಿಸುವಂತೆ ಮನವಿ ಮಾಡಿದರು.
ಇನ್ನು ನಾಳೆ ಬೆಳಗ್ಗೆ 5 ಗಂಟೆಯಿಂದ ಬಂದ್ ನಡೆಯಲಿದೆ. ಅಂಗಡಿ ಮುಂಗಟ್ಟು, ಬಸ್ಗಳು, ಸರ್ಕಾರಿ ಕಚೇರಿಗಳು ಎಲ್ಲಾ ವಹಿವಾಟುಗಳು ಬಂದ್ ಆಗಲಿವೆ. ಕೋಲಾರದಲ್ಲಿ ನಾಳೆ ನಡೆಯುವ ಶಾಂತಿಯುತ ಬಂದ್ ಕೋಲಾರದ ಜನತೆ ಸಹಕಾರ ನೀಡಿ ಬಂದ್ ಬೆಂಬಲಿಸುವಂತೆ ಕಾರ್ಯಕರ್ತರು ತಿಳಿಸಿದರು.
ಇದೇ ಸಂದರ್ಭದಲ್ಲಿ ಕಾವೇರಿ ನಮ್ಮದು, ನಮ್ಮ ಹಕ್ಕು, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡುವುದಿಲ್ಲವೆಂದು ಘೋಷಣೆ ಕೂಗಿ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೂ ಮೊದಲು ಕೋಲಾರದ ಗಾಂಧಿವನದಲ್ಲಿ ಸಭೆ ನಡೆಸಿದರು. ಬೈಕ್ ರ್ಯಾಲಿಯಲ್ಲಿ ಕನ್ನಡ ಸೇನೆ, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ, ಜೆಡಿಎಸ್ ಕಾರ್ಯಕರ್ತರು, ರೈತ ಸಂಘಟನೆಗಳು, ದಲಿತ ಸಂಘಟನೆಗಳು, ನೀರಾವರಿ ಹೋರಾಟ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ಬಂದ್‌ಗೆ ಬೆಂಬಲ ಕರಪತ್ರ ಹಂಚಿದ ಸಂಘಟನೆಗಳು: ತಮಿಳುನಾಡಿಗೆ ಕಾವೇರಿ ನೀರನ್ನು ಬಿಡುವುದನ್ನು ಖಂಡಿಸಿ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಗಡಿಜಿಲ್ಲೆ ಚಾಮರಾಜನಗರ ಜಿಲ್ಲೆಯ 20ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಘೋಷಣೆ ಮಾಡಿವೆ.
ನಾಳೆ ಬೆಳಗ್ಗೆ 6 ರಿಂದ ಸಂಜೆ 6 ತನಕ ಚಾಮರಾಜನಗರವನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಲು ನಿರ್ಧರಿಸಿದ್ದು, ಕಬ್ಬು ಬೆಳೆಗಾರರ ಸಂಘ, ರೈತ ಸಂಘಟನೆ, ಕನ್ನಡಪರ ಸಂಘಟನೆಗಳು, ಖಾಸಗಿ ಸಾರಿಗೆ ಸಂಘ, ಆಟೋ ಚಾಲಕರು, ತಮಿಳರ ಸಂಘ, ಬಿಜೆಪಿ, ಜೆಡಿಎಸ್, ಬಿಎಸ್ ಪಿ, ಎಸ್ ಡಿಪಿಐ ಸೇರಿದಂತೆ 20 ಕ್ಕೂ ಸಂಘಟನೆಗಳು, ರಾಜಕೀಯ ಪಕ್ಷಗಳು ಬೆಂಬಲ ಘೋಷಣೆ ಮಾಡಿವೆ.
ಬೆಳಗ್ಗೆ 6 ರಿಂದ ಚಾಮರಾಜನಗರದ ಪ್ರಮುಖ ರಸ್ತೆಗಳಲ್ಲಿ ರಸ್ತೆ ತಡೆ, ಧರಣಿ, ಮೆರವಣಿಗೆ ನಡೆಯಲಿದೆ. ಸರ್ಕಾರ ತಮಿಳುನಾಡಿಗೆ ನೀರು ಬಿಡಬಾರದೆಂದು ಕಾವೇರಿ ಕ್ರಿಯಾ ಸಮಿತಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.
ಬಂದ್ ಬೆಂಬಲಿಸುವಂತೆ ವರ್ತಕರಿಗೆ ಮನವಿ: ವರ್ತಕರು, ವಾಹನ ಚಾಲಕರು, ಹೋಟೆಲ್ಗಳಿಗೆ ಇಂದು ಕಬ್ಬು ಬೆಳೆಗಾರರ ಸಂಘ ಕರಪತ್ರಗಳನ್ನು ಹಂಚಿ ಬಂದ್ ಗೆ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡರು. ಬಳಿಕ, ಸುದ್ದಿಗಾರರೊಂದಿಗೆ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಕಾವೇರಿಗಾಗಿ ಕಳೆದ 25 ದಿನಗಳಿಂದಲೂ ಗಡಿಜಿಲ್ಲೆ ಚಾಮರಾಜನಗರದಲ್ಲಿ ನಿರಂತರ ಪ್ರತಿಭಟನೆ ನಡೆಯುತ್ತಿದ್ದು, ನಾಳೆ ಕೂಡ ಚಾಮರಾಜನಗರ ಸ್ತಬ್ಧವಾಗಲಿದೆ ಎಂದು ತಿಳಿಸಿದರು.
ಮೈಸೂರಲ್ಲಿ ಗುಲಾಬಿ ಹೂ ನೀಡಿ ಬಂದ್ ಬೆಂಬಲಕ್ಕೆ ಮನವಿ: ಬಂದ್‌ಗೆ ಬೆಂಬಲ ಸೂಚಿಸುವಂತೆ ಆಗ್ರಹಿಸಿ ನಗರದ ದೇವರಾಜ ಅರಸು ರಸ್ತೆಯಲ್ಲಿ ಅಂಗಡಿ ಹಾಗೂ ರಸ್ತೆ ಬದಿ ವ್ಯಾಪಾರಿಗಳು ಮತ್ತು ಪಾದಚಾರಿಗಳಿಗೆ ಗುಲಾಬಿ ಹೂ ನೀಡಿ ವಿಷ್ಣು ಸೇನಾ ಸಮಿತಿಯವರು ಮನವಿ ಮಾಡಿದರು. ನಂತರ ಮಾತನಾಡಿದ ವಿಷ್ಣುಸೇನಾ ಸಮಿತಿ ಅಧ್ಯಕ್ಷ ಎಂ ಡಿ ಪಾರ್ಥಸಾರಥಿ, ಕನ್ನಡ ನೆಲ ಜಲ ಭಾಷೆ ಹೋರಾಟಕ್ಕೆ ಅಂದಿನಿಂದಲೂ ನಟರಾದ ದಿ. ಡಾ. ರಾಜ್ಕುಮಾರ್ ಹಾಗೂ ವಿಷ್ಣುವರ್ಧನ್ ಅವರು ಮುಂಚೂಣಿಯಲ್ಲಿದ್ದರು. ಅದರಂತೆ ಶುಕ್ರವಾರ ನಡೆಯುವ ಕರ್ನಾಟಕ ಬಂದ್ ಯಶಸ್ವಿಯಾಗಲಿ ಹಾಗೂ ಶಾಂತಿಯುತವಾಗಲಿ ಎಂದು ಅಂಗಡಿ ಮಾಲೀಕರು ಹಾಗೂ ನೌಕರರಿಗೆ ಗುಲಾಬಿ ಹೂ ನೀಡಿ ಮನವಿ ಮಾಡಿದ್ದೇವೆ. ವಿಷ್ಣುವರ್ಧನ್ ಸೇನಾ ಸಮಿತಿ ವತಿಯಿಂದ ಪ್ರಮುಖ ರಸ್ತೆ, ಪ್ರಮುಖ ವೃತ್ತಗಳಲ್ಲಿ ತೆರಳಿ ಬಂದ್ ಮಾಡಿಸಲು ಮುಂದಾಗುತ್ತೇವೆ ಎಂದು ತಿಳಿಸಿದರು.
ಹೋಟೆಲ್ ಮಾಲೀಕರ ಸಂಘದ ಬೆಂಬಲ: ನಾಳಿನ ಬಂದ್‌ಗೆ ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘ ಬೆಂಬಲ ಸೂಚಿಸಿದೆ. ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಬಂದ್ ಗೆ ಸಂಪೂರ್ಣ ಬೆಂಬಲ ನೀಡಲು ನಮ್ಮ ಮೈಸೂರು ಹೋಟೆಲ್ ಮಾಲೀಕರ ಸಂಘ ತೀರ್ಮಾನಿಸಿದೆ. ಅದರಂತೆ ಹೋಟೆಲ್, ರೆಸ್ಟೊರೆಂಟ್ (ವೆಜ್/ನಾನ್ ವೆಜ್) ಬೇಕರಿಗಳು, ಸ್ವೀಟ್ ಶಾಪ್, ಫಾಸ್ಟ್ಫುಡ್, ಟೀ, ಕಾಫಿ ಅಂಗಡಿ, ಚಾಟ್ಸ್ ಅಂಗಡಿ ಮತ್ತು ಐಷಾರಾಮಿ ಹೋಟೆಲ್ ಸೇರಿದಂತೆ ಸಕಲ ಆತಿಥ್ಯ ನೀಡುವ ಎಲ್ಲ ವ್ಯಾಪಾರಿಗಳು ಬಂದ್ ಮಾಡಲಿದ್ದಾರೆ.
ಇದನ್ನೂಓದಿ:ನಾಳೆ ಕರ್ನಾಟಕ ಬಂದ್.. ಇಂದು ಮಧ್ಯರಾತ್ರಿಯಿಂದಲೇ ಬೆಂಗಳೂರಲ್ಲಿ 144 ಸೆಕ್ಷನ್ ಜಾರಿ