ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿಯುವುದರ ಮೂಲಕ ಕಾಂಗ್ರೆಸ್ಗೆ ಮುಖಭಂಗವಾಗಿದೆ.
ಹೌದು, ಇಂದು ಶ್ರೀನಿವಾಸಪುರ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಗೆಲ್ಲುವ ಅವಕಾಶವಿದ್ದರೂ, ಕಾಂಗ್ರೆಸ್ನಲ್ಲಿನ ಒಳಜಗಳ ಹಾಗೂ ಗುಂಪುಗಾರಿಕೆಯಿಂದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಕೈ ಚೆಲ್ಲಿದ ಪರಿಣಾಮ, ಜೆಡಿಎಸ್ ಗದ್ದುಗೆ ಏರಿದೆ.
ಈ ಹಿನ್ನೆಲೆ ಶ್ರೀನಿವಾಸಪುರ ಕ್ಷೇತ್ರದ ಅಭಿವೃದ್ಧಿ ಜೆಡಿಎಸ್ನಿಂದ ಮಾತ್ರ ಎಂದು ಹೇಳುವ ಮೂಲಕ ಜೆಡಿಎಸ್ನ ಮಾಜಿ ಶಾಸಕ ವೆಂಕಟಶಿವಾರೆಡ್ಡಿ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಟಾಂಗ್ ನೀಡಿದ್ದಾರೆ. ಅಲ್ಲದೆ ಬೇರೆಯವರ ರೀತಿ ಅಭಿವೃದ್ಧಿ ಕೆಲಸಗಳು ನನ್ನಿಂದ ಆಗಿದೆ ಎಂದು ಸುಳ್ಳು ಹೇಳಿಕೊಂಡು ರಾಜಕಾರಣ ಮಾಡಿಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ದ ಗುಡುಗಿದ್ರು. ಇನ್ನು ಶ್ರೀನಿವಾಸಪುರ ಕ್ಷೇತ್ರದಲ್ಲಿ ಶೇ.90 ರಷ್ಟು ಅಭಿವೃದ್ದಿ ಕಾರ್ಯಗಳು ನನ್ನಿಂದ ಆಗಿದೆ. ಮುಂದಿನ ಚುನಾವಣೆಯಲ್ಲಿ ಮತ್ತೆ ವಿಧಾನಸೌಧಕ್ಕೆ ತೆರಳುವುದಾಗಿ ತಿಳಿಸಿದರು.
ಶ್ರೀನಿವಾಸಪುರ ಪುರಸಭೆಯ 23 ಸದಸ್ಯ ಬಲದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮಬಲ ಕಾಯ್ದುಕೊಂಡಿತ್ತು. ( ಜೆಡಿಎಸ್ 11, ಬಂಡಾಯ ಜೆಡಿಎಸ್ 1, ಕಾಂಗ್ರೆಸ್ 8, ಬಂಡಾಯ ಕಾಂಗ್ರೆಸ್ 3, ಶಾಸಕ ಮತ 1) ಆದ್ರೆ ಕಾಂಗ್ರೆಸ್ನಲ್ಲಿನ ಗುಂಪುಗಾರಿಕೆಯಿಂದ ಅಧ್ಯಕ್ಷೆಯಾಗಿ ಜೆಡಿಎಸ್ನ ಲಲಿತಾ ಶ್ರೀನಿವಾಸ್ ಹಾಗೂ ಉಪಾಧ್ಯಕ್ಷೆಯಾಗಿ ಅಯುಷಾ ನಯಾಜ್ ಆಯ್ಕೆಯಾಗುವ ಮೂಲಕ, ಕಾಂಗ್ರೆಸ್ನ ರಮೇಶ್ ಕುಮಾರ್ ಬಣ ಪುರಸಭೆ ಹಿಡಿತ ಕಳೆದುಕೊಳ್ಳುವಂತಾಗಿದೆ.