ಕೋಲಾರ: ದೇಶದ ಭವಿಷ್ಯಕ್ಕಾಗಿ ಪಕ್ಷದ ಹೈಕಮಾಂಡ್ ಯಾವುದೇ ತೀರ್ಮಾನ ತೆಗೆದುಕೊಂಡರೂ ನಾನು ಅದಕ್ಕೆ ಬದ್ದನಾಗಿದ್ದೇನೆ ಎಂದು ಕೋಲಾರದಲ್ಲಿ ಸಂಸದ ಎಸ್.ಮುನಿಸ್ವಾಮಿ ಹೇಳಿಕೆ ನೀಡಿದರು. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಮೈತ್ರಿ ವಿಚಾರ ಹಾಗೂ ಕೋಲಾರ ಲೋಕಸಭಾ ಕ್ಷೇತ್ರ ಜೆಡಿಎಸ್ಗೆ ಬಿಟ್ಟುಕೊಡುವುದರ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನಾಯಕತ್ವ ಮೆಚ್ಚಿ ಪಕ್ಷಕ್ಕೆ ಬಂದವರಿಗೆ ಸಹಕಾರ ಇದೆ. ಅಲ್ಲದೇ ಗ್ಯಾರಂಟಿಗಳ ಆಧಾರ ಮೇಲೆ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ಸರ್ಕಾರವನ್ನ ಜನರು ಛೀಮಾರಿ ಹಾಕುತ್ತಿದ್ದಾರೆ, ಹೀಗಾಗಿ ಇವತ್ತು ಚುನಾವಣೆ ನಡೆದರೂ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸುವುದಾಗಿ ಜನ ತೀರ್ಮಾನಿಸಿದ್ದಾರೆ.
ಇನ್ನು ಕೋಲಾರ ಲೋಕಸಭಾ ಚುನಾವಣೆಯಲ್ಲಿ ಯಾರೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಂದರೂ ಬಿಜೆಪಿ ಗೆಲ್ಲುತ್ತದೆ, ಜೊತೆಗೆ ಮೋದಿ ಅವರು ಪ್ರಧಾನಿಯಾಗಲಿದ್ದಾರೆ ಎಂದು ಹೇಳಿದರು. ಇನ್ನೂ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ನವರು ಕೋಲಾರ ಕ್ಷೇತ್ರವನ್ನ ಸಹ ಕೇಳಿದ್ದಾರೆ, ಕೇಳಿದ ತಕ್ಷಣ ಕೊಟ್ಟರು ಎಂದಲ್ಲ, ಆದರೆ ಮೋದಿ ಅವರು ಪ್ರಧಾನಿಯಾಗಬೇಕು, ದೇಶದ ಹಿತ ದೃಷ್ಟಿಯಿಂದ ಹೈಕಮಾಂಡ್ ಯಾವುದೇ ತೀರ್ಮಾನ ತೆಗೆದುಕೊಂಡರೂ ನಾನು ಅದಕ್ಕೆ ಬದ್ದ ಎಂದರು. ವಿಧಾನ ಸಭಾ ಚುನಾವಣೆ ನಂತರ ಎಲ್ಲಾ ಪಕ್ಷದವರು ಮೋದಿ ಅವರಿಗೆ ಮತ ಕೊಡುವುದಾಗಿ ಹೇಳುತ್ತಿದ್ದಾರೆ.
ಅಲಿಬಾಬಾ ನಲವತ್ತು ಕಳ್ಳರಿರುವ I.N.D.I.A ಮೈತ್ರಿಕೂಟ ಮಾಡಿಕೊಂಡವರನ್ನ ಮನೆಗೆ ಕಳುಹಿಸಬೇಕು ಎಂದು ತೀರ್ಮಾನಿಸಿದ್ದಾರೆ ಎಂದರು. ಇನ್ನೂ ಮೋದಿ ಅವರ ಆಡಳಿತ ಮೆಚ್ಚಿ ಮೈತ್ರಿಗೆ ಬರ್ತಿದ್ದಾರೆ, ಆದರೆ ಬಿಜೆಪಿ ಪಕ್ಷದಲ್ಲಿ ಕೋಲಾರ ಬಿಟ್ಟುಕೊಡಿತ್ತೇವೆ ಎಂದು ಎಲ್ಲಿಯೂ ಚರ್ಚೆ ಆಗಿಲ್ಲ, ಒಂದು ವೇಳೆ ಆ ಸನ್ನಿವೇಶ ಇದ್ದರೆ ನಮ್ಮೊಂದಿಗೆ ಚರ್ಚೆ ಮಾಡುತ್ತಾರೆ, ಆ ನಂತರ ಹೈಕಮಾಂಡ್ ನಿರ್ಧಾರದಂತೆ ನಾನು ನಡೆದುಕೊಳ್ಳುವೆ ಎಂದರು.
ನಂತರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ, ಮೂಡಣ ಬಾಗಿಲು ಕುರುಡುಮಲೆ ವಿನಾಯಕನಿಗೆ ಪೂಜೆ ಸಲ್ಲಿಸುವ ಮೂಲಕ, ಲೋಕಸಭಾ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡುವುದಾಗಿ ಮುನಿಸ್ವಾಮಿ ಹೇಳಿದರು. ಇದೇ ತಿಂಗಳು 16ನೇ ತಾರೀಖು ಯಡಿಯೂರಪ್ಪ ಸೇರಿದಂತೆ ರಾಜ್ಯದ ನಾಯಕರು ಕುರುಡುಮಲೆ ಗಣಪತಿಗೆ ಪೂಜೆ ಸಲ್ಲಿಸುವ ಮೂಲಕ ಕೋಲಾರದಿಂದ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಾಗುತ್ತದೆ. ಇನ್ನು ನರೇಂದ್ರ ಮೋದಿ ಅವರು ಪ್ರಧಾನಿಯಾಗಬೇಕೆಂದು ಜೊತೆಗೆ ರಾಜ್ಯದ 28 ಸ್ಥಾನದಲ್ಲಿ ಬಿಜೆಪಿ ಗೆಲ್ಲುವುದಕ್ಕಾಗಿ, ಪಕ್ಷದ ವರಿಷ್ಠರ ಸೂಚನೆ ಮೇರೆಗೆ ಈ ಕಾರ್ಯಕ್ರಮವನ್ನ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಇದನ್ನೂ ಓದಿ: ಶಿಕ್ಷಕರು, ಪದವೀಧರರು ನಾಡಿನ ಅಭಿವೃದ್ಧಿ ಪರವಾಗಿ ಇದ್ದಾರೆ, ನಮ್ಮನ್ನು ಬೆಂಬಲಿಸುತ್ತಾರೆ: ಸಿಎಂ ಸಿದ್ದರಾಮಯ್ಯ ವಿಶ್ವಾಸ