ಕೋಲಾರ : ಕೊರೊನಾ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದ ಕುಟುಂಬವನ್ನ ಹೋಂ ಕ್ವಾರಂಟೈನ್ನಲ್ಲಿರಿಸಲಾಗಿದೆ. ಕೋಲಾರ ಗಡಿಭಾಗವಾದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಯಲು ನರಸಾಪುರ ಗ್ರಾಮದ ಕೊರೊನಾ ಸೋಂಕಿತನೋರ್ವ, ಕೋಲಾರ ತಾಲೂಕಿನ ನರಸಾಪುರ ಗ್ರಾಮದ ಕುಟುಂಬಕ್ಕೆ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಇಡೀ ಕುಟುಂಬವನ್ನೇ ಹೋಂ ಕ್ವಾರಂಟೈನ್ ಮಾಡಲಾಗಿದೆ.
ಮರಳು ವ್ಯಾಪಾರ ಹಾಗೂ ಡ್ರೈವರ್ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯ ಸಂಪರ್ಕ ಹೊಂದಿದ್ದ. ನರಸಾಪುರ ಗ್ರಾಮದ ಒಂದೇ ಕುಟುಂಬದ ಎಂಟು ಜನರನ್ನ ಹೋಂ ಕ್ವಾರಂಟೈನ್ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಬಯಲು ನರಸಾಪುರದಿಂದ ಸೋಂಕಿತ ವ್ಯಕ್ತಿ ಇವರ ಮನೆಗೆ ಬಂದಿದ್ದ ಎನ್ನಲಾಗಿದೆ. ಕೋಲಾರ ತಾಲೂಕಿನ ವೇಮಗಲ್ ಸೇರಿದಂತೆ ನರಸಾಪುರ ಭಾಗಗಳಲ್ಲಿ ಒಡನಾಟ ಇತ್ತು ಎನ್ನಲಾಗಿದೆ.
ಕಳೆದ ರಾತ್ರಿ ವೇಮಗಲ್ಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಸತ್ಯಭಾಮ ಅವರು, ವೇಮಗಲ್ ಹೋಬಳಿಗೆ ಸಂಪರ್ಕ ಹೊಂದುವ ಎಲ್ಲಾ ರಸ್ತೆಗಳನ್ನ ಬಂದ್ ಮಾಡುವಂತೆ ಪಿಡಿಒಗೆ ಸೂಚಿಸಿದ್ದಾರೆ. ಯಾರೊಬ್ಬರು ಆಯಾ ಗ್ರಾಮಗಳಿಂದ ಹೊರಬರದಂತೆ ನೋಡಿಕೊಳ್ಳಲು ಸೂಚಿಸಿದ್ದಾರೆ. ಜೊತೆಗೆ ಜಿಲ್ಲಾಡಳಿತದ ವತಿಯಿಂದ ಮುಂಜಾಗ್ರತಾ ಕ್ರಮವಾಗಿ ಕೊರೊನಾ ಸೋಂಕಿತನ ಸಂಪರ್ಕ ಹೊಂದಿದ ಕುಟುಂಬಕ್ಕೆ ಕ್ವಾರಂಟೈನ್ ಮಾಡಿ ನಿಗಾವಹಿಸಿದ್ದಾರೆ. ಕೋಲಾರ ಬೆಂಗಳೂರು ಗಡಿ ಭಾಗಗಳಲ್ಲಿನ ಜನರಲ್ಲಿ ಕೊರೊನಾ ಆತಂಕ ಹೆಚ್ಚಿದೆ. ಈ ಕುರಿತು ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ.