ಕೋಲಾರ: ಮಹಾಮಳೆಯಿಂದಾಗಿ ನಗರದ ಬೆತ್ಲಹೆಮ್ ಬಡಾವಣೆ ಸಂಪೂರ್ಣ ಮುಳುಗಡೆಯಾಗಿದೆ. ಪರಿಣಾಮ ಮನೆಯಲ್ಲಿದ್ದ ಜನ ಹೊರಬಾರದಂತಹ ಸ್ಥಿತಿ ನಿರ್ಮಾಣವಾಗಿದೆ.
ನಗರದಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ವಾಹನಗಳು ನೀರಿನಲ್ಲಿ ಮುಳುಗಿವೆ. ಇಲ್ಲಿನ ಪ್ರತಿಷ್ಠಿತಿ ಆರ್.ವಿ ಇಂಟರ್ ನ್ಯಾಷನಲ್ ಸ್ಕೂಲ್‌ನ (R.V.International School) ಆವರಣ ಸಂಪೂರ್ಣವಾಗಿ ಜಲಾವೃತವಾಗಿದೆ. ಅಲ್ಲದೇ, ಬಿಜಿಎಸ್ ಶಾಲೆಯ ಕಟ್ಟಡ ಕೂಡಾ ಮುಳುಗಿದೆ. ಪರಿಸ್ಥಿತಿಯನ್ನು ಅರಿತ ಜಿಲ್ಲಾಡಳಿತ ಇಂದು ಮತ್ತು ನಾಳೆ ಶಾಲೆಗಳಿಗೆ ರಜೆ ಘೋಷಣೆ ಮಾಡಿದೆ.
ಬೆಳೆ ನಾಶ
ಕೋಲಾರ ತಾಲೂಕು ಚೌಡದೇನಹಳ್ಳಿ ಗ್ರಾಮದಲ್ಲಿ ಕುರಿ ಹಾಗೂ ಮೇಕೆಯ ಶೆಡ್ಗಳು ಸಂಪೂರ್ಣ ಮುಳುಗಡೆಯಾಗಿವೆ. ನೀರಿನ ರಭಸಕ್ಕೆ ಎರಡು- ಮೂರು ಕುರಿಗಳು ಕೊಚ್ಚಿಹೋಗಿವೆ. ಅಲ್ಲದೇ, ಇದೇ ಗ್ರಾಮದ ನೂರಾರು ಎಕರೆ ಪ್ರದೇಶದಲ್ಲಿನ ಬೆಳೆಗಳು ಜಲಾವೃತವಾಗಿವೆ.
ಸೇತುವೆ ಕುಸಿಯುವ ಆತಂಕ
ಅಧಿಕ ಮಳೆಯಿಂದಾಗಿ ಕೋಲಾರಮ್ಮ ಕೆರೆ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಪರಿಣಾಮ, ಕೆರೆಯ ಕೋಡಿ ಹರಿಯುವ ಪ್ರದೇಶದಲ್ಲಿ ಶಿಥಿಲವಾಗಿದ್ದ ಸೇತುವೆ ಕೊಚ್ಚಿಹೋಗುವ ಹಂತಕ್ಕೆ ಬಂದಿದೆ. ಹೀಗಾಗಿ, ರಸ್ತೆ ಸಂಚಾರವನ್ನು ಬಂದ್ ಮಾಡಿದ ಪೊಲೀಸರು, ಯಾವುದೇ ವಾಹನಗಳಾಗಲೀ, ಜನರಾಗಲಿ ಓಡಾಡದಂತೆ ಬ್ಯಾರಿಕೇಡ್ಗಳನ್ನು ಹಾಕಿ ನಿರ್ಬಂಧ ವಿಧಿಸಿದ್ದಾರೆ.
ಇದನ್ನೂ ಓದಿ: ಯಲಹಂಕದ ಅಪಾರ್ಟ್ಮೆಂಟ್ಗೆ ಜಲದಿಗ್ಬಂಧನ : ಮಳೆ ಜತೆ ಕೆರೆ ಕೋಡಿ ಒಡೆದು ನಿವಾಸಿಗಳ ಪರದಾಟ