ಕೋಲಾರ: ಕೇಂದ್ರದಿಂದ ಬರಬೇಕಿದ್ದ ಮೂರು ತಿಂಗಳ ಪಡಿತರ ಆಹಾರ ಈಗಾಗಲೇ ರಾಜ್ಯಕ್ಕೆ ಬಂದಿದೆ. ಇದನ್ನು ಸಮರ್ಪಕವಾಗಿ ಜನರಿಗೆ ತಲುಪಿಸಲಾಗುತ್ತಿದೆ ಎಂದು ಆಹಾರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಖಾತೆ ಸಚಿವ ಕೆ.ಗೋಪಾಲಯ್ಯ ತಿಳಿಸಿದ್ರು.
ಕೋಲಾರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನೆ ಸಭೆಗೆ ಆಗಮಿಸಿದ್ದ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರದಿಂದ ಈಗಾಗಲೇ ಏಪ್ರಿಲ್, ಮೇ ಮತ್ತು ಜೂನ್ ತಿಂಗಳ ದಿನಸಿ ಬಂದಿದೆ. ಇವುಗಳನ್ನು ಸಮರ್ಪಕವಾಗಿ ವಿತರಣೆ ಮಾಡಲಾಗುತ್ತಿದೆ ಎಂದರು.
ಬಡವರಿಗೆ ನೀಡುತ್ತಿರುವ ದಿನಸಿಯ ತೂಕದಲ್ಲಿ ವ್ಯತ್ಯಾಸ, ಗ್ರಾಹಕರಿಂದ ಹಣ ಪಡೆಯುವಂತಹ ದೂರುಗಳು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಎಚ್ಚರಿಸಿದರು.
ರಾಜ್ಯದಲ್ಲಿ ಈಗಾಗಲೇ ಸುಮಾರು 142 ರೇಷನ್ ಅಂಗಡಿಗಳ ಪರವಾನಗಿ ರದ್ದುಗೊಳಿಸಿದೆ. ಬಡವರಿಗೆ ನೀಡುವಂತಹ ಪಡಿತರ ಆಹಾರದಲ್ಲಿ ಮೋಸವಾಗದಂತೆ ಎಚ್ಚರಿಕೆ ವಹಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್, ಜಿಲ್ಲಾಧಿಕಾರಿ ಸತ್ಯಭಾಮ, ಎಸ್ಪಿ ಕಾರ್ತಿಕ್ ರೆಡ್ಡಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.