ಕೋಲಾರ: ಕೊರೊನಾ ಲಾಕ್ಡೌನ್ ನಿಂದ ಶಾಲೆಗಳು ಬಂದ್ ಆಗಿದ್ದು ಶಾಲಾ ಆವರಣಗಳಲ್ಲಿ ಅಕ್ರಮ ಚಟುವಟಿಕೆಗಳು ಮಿತಿ ಮೀರಿವೆ. ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಾಸ್ತೇನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಕೆಲ ಗ್ರಾಮಸ್ಥರು ಇಸ್ಪೀಟ್ ಆಡುವ ಮೂಲಕ ಸಾವಿರಾರು ರೂ. ಬೆಟ್ಟಿಂಗ್ ಧಂದೆ ನಡೆಸುತ್ತಿದ್ದಾರೆ. ಅಲ್ಲದೇ ಶಾಲಾ ಆವರಣದಲ್ಲಿ ಮದ್ಯ ಸೇವಿಸುವುದು, ಧೂಮಪಾನ ಮಾಡುವುದು ನಿರಂತರವಾಗಿ ನಡೆಯುತ್ತಿದೆ.
ಲಕ್ಷಾಂತರ ರೂ. ಹಣ ಬೆಟ್ಟಿಂಗ್ ನಡೆಯುತ್ತಿದ್ದು, ಜೂಜಾಟದ ಅಡ್ಡೆಗಳಿಗೆ ಪೊಲೀಸರೇ ರಕ್ಷಣೆ ನೀಡ್ತಿದ್ದಾರೆಂದು ಇತ್ತೀಚೆಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆರೋಪಿಸಿದ್ದರು. ಇದೀಗ ಶಾಲಾ ಆವರಣದಲ್ಲಿ ಕಾನೂನು ಬಾಹಿರ ಚಟುವಟಿಕೆ ಎಗ್ಗಿಲ್ಲದೆ ನಡೆಯುತ್ತಿದ್ದರೂ, ತಮಗು ಇದಕ್ಕೂ ಯಾವುದೇ ಸಂಬಂಧವಿಲ್ಲದಂತೆ ಪೊಲೀಸರು ವರ್ತನೆ ಮಾಡ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿವೆ.
ಶ್ರೀನಿವಾಸಪುರದಲ್ಲಿ ಜೂಜಾಟ, ಕೋಳಿಪಂದ್ಯಗಳ ಜೊತೆಗೆ ಪೊಲೀಸರು ರಸ್ತೆಗಳಲ್ಲಿ ವಾಹನ ಅಡ್ಡಗಟ್ಟಿ ಹಣ ವಸೂಲಿ ಮಾಡುವ ಪ್ರಕರಣಗಳು ಹೆಚ್ಚುತ್ತಿದ್ದು, ಇಂತಹ ಅಕ್ರಮಗಳಿಗೆ ನೂತನ ಎಸ್ಪಿಯಾಗಿ ಜಿಲ್ಲೆಗೆ ಆಗಮಿಸಿರುವ ಡೆಕ್ಕಾ ಕಿಶೋರ್ ಬಾಬು ಅವರು ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.