ಕೋಲಾರ: ಮಾಜಿ ಸಿಎಂ ಕುಮಾರಸ್ವಾಮಿ ದೂರವಾಣಿ ಕದ್ದಾಲಿಕೆ ಮಾಡುವಂತಹ ವ್ಯಕ್ತಿ ಅಲ್ಲ. ಆ ಮಟ್ಟಕ್ಕೆ ಹೋಗುವವರು ಅವರಲ್ಲ ಎಂದು ಕೋಲಾರದಲ್ಲಿ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಮಾಜಿ ಸಿಎಂ ಕುಮಾರಸ್ವಾಮಿ ಪರ ಬ್ಯಾಟಿಂಗ್ ಮಾಡಿದ್ದಾರೆ.
ಕೋಲಾರದ ಸರ್. ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೂರವಾಣಿ ಕದ್ದಾಲಿಕೆ ಮಾಡಿದ್ರೆ ತಪ್ಪಾಗುತ್ತೆ. ಆದ್ರೆ ಅದರ ಬಗ್ಗೆ ಸರಿಯಾಗಿ ನನಗೆ ಮಾಹಿತಿ ಗೊತ್ತಿಲ್ಲ. ಓದಿ ತಿಳಿದುಕೊಂಡು ಅದರ ಕುರಿತಾಗಿ ಮಾತನಾಡುವೆ. ಅದ್ರೆ ಕುಮಾರಸ್ವಾಮಿ ಹೀಗೆ ಮಾಡಿರಲ್ಲ ಬಿಡಿ. ಅತೃಪ್ತರು ಪಕ್ಷ ಬಿಟ್ಟು ಹೋಗಿರುವ ಹಿನ್ನೆಲೆ ಹೀಗೆ ಅರೋಪ ಮಾಡುತ್ತಿದ್ದಾರೆ ಎಂದರು.
ಇದೆ ವೇಳೆ ಮಾತನಾಡಿದ ಕೋಲಾರ ಸಂಸದ ಎಸ್.ಮುನಿಸ್ವಾಮಿ, ರಾಜ್ಯದಲ್ಲಿ ನೆರೆ ಇದೆ. ಇಂತಹ ಸಂದರ್ಭದಲ್ಲಿ ಹೀಗೆ ಮಾಡಲು ಅವರಿಗೆ ನಾಚಿಕೆಯಾಗಬೇಕು. ಈಗಾಗಲೇ ಜನ ಅವರನ್ನ ತಿರಸ್ಕಾರ ಮಾಡಿದ್ದಾರೆ. ಹಾಗಾಗಿ ಮನೆಗೆ ಹೋಗಿದ್ದಾರೆ. ಮನೆಯಲ್ಲಿ ಸುಮ್ಮನಿರುವುದು ಬಿಟ್ಟು ಹೀಗೆ ಟೆಲಿಫೋನ್ ಕದ್ದಾಲಿಕೆ ಕೆಲಸ ಮಾಡುತ್ತಿದ್ದಾರೆ ಎಂದರು.
ಇನ್ನೂ ನೆರೆ ಬಂದು ಸಂಕಷ್ಟದಲ್ಲಿರುವಾಗ ಸಚಿವ ಸಂಪುಟ ವಿಸ್ತರಣೆ ಸರಿಯಲ್ಲ. ಹಾಗಾಗಿ ಸಚಿವ ವಿಸ್ತರಣೆಯಾಗಿಲ್ಲ,ಕೇಂದ್ರದ ಹಣಕಾಸು ಸಚಿವ ಹಾಗೂ ಗೃಹ ಸಚಿವರು ನೆರೆ ವೀಕ್ಷಣೆ ಮಾಡಿದ್ದಾರೆ. ತಡವಾದ್ರು ಶೇ.100 ರಷ್ಟು ಕೇಂದ್ರದಿಂದ ಬರ ಪರಿಹಾರ ಸಿಗುತ್ತೆ ಎಂದು ಭರವಸೆ ನೀಡಿದ್ರು.