ಕೋಲಾರ: ಕಾವೇರಿ ನದಿ ಪಾತ್ರದಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ ಚಾಮರಾಜನಗರದಿಂದ ಕೃಷ್ಣಗಿರಿ ಮಾರ್ಗವಾಗಿ ಕೋಲಾರಕ್ಕೆ ಆನೆಗಳು ವಲಸೆ ಬಂದಿವೆ. ಕಾಡಾನೆಗಳ ಹಾವಳಿಯಿಂದ ರೈತರು ಕಂಗಾಲಾಗಿದ್ದು, ಜಿಲ್ಲೆಯ ಗಡಿಯಲ್ಲಿ ಆನೆ ದಾಳಿಗೆ ಎರಡು ವರ್ಷದಲ್ಲಿ ನಾಲ್ವರ ಜೀವ ಹಾನಿಯಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆನಷ್ಟ ಸಂಭವಿಸಿದೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ, ಮಾಲೂರು ಮತ್ತು ಕೆಜಿಎಫ್ ತಾಲೂಕುಗಳು ಆಂಧ್ರ ಹಾಗೂ ತಮಿಳುನಾಡು ರಾಜ್ಯಗಳಿಗೆ ಹೊಂದಿಕೊಂಡಿವೆ. ಹಾಗಾಗಿ ಈ ಭಾಗದಲ್ಲಿ ಸಾವಿರಾರು ಎಕರೆ ಅರಣ್ಯ ಪ್ರದೇಶವಿದೆ. ಕಳೆದ ಎರಡು ವರ್ಷಗಳಿಂದ ನೆರೆ ರಾಜ್ಯದ ಕೃಷ್ಣಗಿರಿಯಿಂದ ವಲಸೆ ಬರುವ ಆನೆಗಳು ಹಾಗೂ ಮಾನವ ಸಂಘರ್ಷಕ್ಕೆ ಕಾರಣವಾಗಿತ್ತು. ಕಾಡಂಚಿನಲ್ಲಿ ವಾಸವಿರುವ ಗ್ರಾಮಗಳಲ್ಲಿ ಆನೆ ಹಾವಳಿ ಮಿತಿ ಮೀರಿದೆ. ರೈತರು ಜೀವ ಕೈಯಲ್ಲಿ ಹಿಡಿದುಕೊಂಡು ತಮ್ಮ ತೋಟ ಇನ್ನಿತರ ಕಡೆ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ಅರಣ್ಯ ಇಲಾಖೆ ಪ್ರಕಾರ ಕಳೆದ ಎರಡು ವರ್ಷದಲ್ಲಿ ಇದುವರೆಗೂ ನಾಲ್ವರು ರೈತರನ್ನ ಬಲಿ ಪಡೆದಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಾಶ ಮಾಡಿವೆ. ಬಂಗಾರಪೇಟೆ ತಾಲೂಕಿನ ಬೂದಿಕೋಟೆ, ಕನುಮನಹಳ್ಳಿ ಹಾಗೂ ಕಾಮಸಮುದ್ರ ಹೋಬಳಿಗಳ ಹಲವು ಗ್ರಾಮಗಳಲ್ಲಿ, ಆನೆ ಹಾವಳಿಯಿಂದಾಗಿ, ಕಳೆದ ಹತ್ತು ವರ್ಷಗಳ ಅವಧಿಯಲ್ಲಿ 20 ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದಾರೆ.
ಕಾಡಂಚಿನ ಗ್ರಾಮಗಳ ಸುತ್ತ ಆನೆ ದಾಳಿಯಿಂದ ಸಾಕಷ್ಟು ಪ್ರಮಾಣದ ಬೆಳೆ ನಾಶವಾಗಿದೆ. ಟೊಮೇಟೊ, ರಾಗಿ, ಬಾಳೆ, ಕ್ಯಾಪ್ಸಿಕಂ, ಹೂ ಬೆಳೆಗಳು ಸೇರಿದಂತೆ ವಿವಿಧ ರೀತಿಯ ತೋಟಗಳಿಗೆ ದಾಳಿ ಮಾಡಿರುವ ಆನೆಗಳು ಲಕ್ಷಾಂತರ ರೂಪಾಯಿಯಷ್ಟು ಬೆಳೆಗಳನ್ನ ಹಾಳು ಮಾಡಿವೆ. ಇದರಿಂದ ಗಡಿ ಭಾಗದ ಜನರು ಬೆಳೆ ಬೆಳೆಯುವುದಕ್ಕೂ ಹಿಂಜರಿಯುತ್ತಿದ್ದಾರೆ. ಜೊತೆಗೆ ಸಾಲ ಮಾಡಿ ಬೆಳೆ ಬೆಳೆದರೆ, ಅವೆಲ್ಲವೂ ಕಾಡಾನೆಗಳ ಪಾಲಾಗುತ್ತಿವೆ. ಹೀಗಾಗಿ ಈ ಭಾಗದ ರೈತರು ನಿತ್ಯ ಆತಂಕದಲ್ಲೆ ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಜಿಲ್ಲಾ ವ್ಯಾಪ್ತಿಯ ಸುಮಾರು 60 ಕಿಲೋಮೀಟರ್ ಉದ್ದದ ಕಾಡು ಪ್ರದೇಶಕ್ಕೆ 70 ಕೋಟಿ ವೆಚ್ಚದಲ್ಲಿ ರೈಲ್ವೇ ಬ್ಯಾರಿಕೇಡ್ ನಿರ್ಮಾಣದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಈಗಾಗಲೇ ಸಲ್ಲಿಸಲಾಗಿದೆ. ಆದರೆ ಅದು ಪ್ರಸ್ತಾವನೆಯಾಗಿಯೇ ಉಳಿದಿದೆ.
ಈ ಕೂಡಲೇ ಆನೆ ಹಾವಳಿಗೊಂದು ಪರಿಹಾರ ಒದಗಿಸಿ, ಆದಷ್ಟು ಬೇಗ ಕಾಡಾನೆ ಹಾವಳಿಗೆ ಬ್ರೇಕ್ ಹಾಕುವುದರ ಮೂಲಕ ಈ ಭಾಗದ ರೈತರ ಆತಂಕ ದೂರ ಮಾಡಬೇಕು. ಮೃತರ ಕುಟುಂಬಕ್ಕೆ ಸರ್ಕಾರದಿಂದ ಬರುವ ಸೂಕ್ತ ಪರಿಹಾರದ ಜೊತೆಗೆ ಆನೆ ಹಾವಳಿ ತಡೆಗೆ ಕ್ರಮ ಕೈಗೊಳ್ಳಬೇಕು. ಜೊತೆಗೆ ರೈತರಿಗೆ ಸೂಕ್ತ ಬೆಳೆ ಪರಿಹಾರ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.