ಕೋಲಾರ: ತನ್ನ ಯಜಮಾನನಿಗೆ ಪ್ರಾಣ ಕಂಟಕವಾಗಿ ಎದುರಾಗಿದ್ದ ನಾಗರಹಾವಿನೊಂದಿಗೆ ದಿಟ್ಟತನದಿಂದ ಹೋರಾಡಿದ ಶ್ವಾನವು ಹಾವನ್ನೂ ಕೊಂದು ಕೊನೆಗೆ ತನ್ನ ಪ್ರಾಣವನ್ನೂ ಸಮರ್ಪಿಸಿದ ಘಟನೆ ಕೋಲಾರದ ಬೀರಂಡಹಳ್ಳಿಯ ನಡೆದಿದೆ. ಶ್ವಾನದ ಹೆಸರು ಕ್ಯಾಸಿ. ಹೆಸರಿಗೆ ತಕ್ಕಂತೆ ಚೂಸಿಯೂ ಆಗಿತ್ತು. ಅಮೆರಿಕನ್ ಬುಲ್ ತಳಿಯ 3 ವರ್ಷದ ಹೆಣ್ಣು ಶ್ವಾನ ಇದಾಗಿದ್ದು ಮನೆಮಂದಿಯ ಅಕ್ಕರೆಯ ಮಗುವಿನಂತಿತ್ತು.
ಇದನ್ನೂ ಓದಿ: 206 ಕಿಡ್ನಿ ಕಲ್ಲುಗಳನ್ನು ಹೊರತೆಗೆದು ರೋಗಿಯ ಪ್ರಾಣ ಉಳಿಸಿದ ವೈದ್ಯರು!
ಅಂದು ಮಧ್ಯಾಹ್ನ ತೋಟದ ಮನೆಯಲ್ಲಿದ್ದ ಮಾಲೀಕ ವಿಲಾಸ್ ಮೊಬೈಲ್ನಲ್ಲಿ ಮಾತನಾಡುತ್ತಾ ಹೊರಗೆ ಬಂದು ಮನೆಯಂಗಳದಲ್ಲಿ ಬೆಳೆದಿದ್ದ ಹಸಿರು ಹುಲ್ಲಿನ ನಡುವೆ ನಡೆದಾಡುತ್ತಿದ್ದರು. ಕ್ಯಾಸಿಯೂ ತನ್ನ ಯಜಮಾನನ್ನು ಹಿಂಬಾಲಿಸುತ್ತಿತ್ತು. ಅಷ್ಟರಲ್ಲಿ ಹುಲ್ಲಿನ ಮರೆಯಲ್ಲಿ ಮಲಗಿದ್ದ ನಾಗರ ಹಾವೊಂದು ದಿಟ್ಟನೆ ಹೆಡೆ ಎದ್ದು ನಿಂತಿದೆ. ಇನ್ನೇನು ಕಚ್ಚಲು ಸಜ್ಜಾಗಿತ್ತು. ಅಪಾಯದ ಸುಳಿವರಿತ ಕ್ಯಾಸಿ ತಕ್ಷಣವೇ ಮುನ್ನುಗ್ಗಿ ಯಜಮಾನನ ಕಾಲಿಗೆ ಅಡ್ಡ ಬಂದು ಹಾವನ್ನು ಹಿಡಿದಿದೆ.
ಬಾಯಿಯಿಂದ ಜಾರಿ ಬಿದ್ದ ಹಾವು ಕೆರಳಿ ಬುಸುಗುಡುತ್ತಾ ಮತ್ತೆ ಕಚ್ಚಲು ಮುಂದಾಗಿತ್ತು. ಆಗ ಹಾವು ಮತ್ತು ಶ್ವಾನ ಕ್ಯಾಸಿ ನಡುವೆ ಒಂದು ರೀತಿಯ ಕಾಳಗವೇ ಸೃಷ್ಟಿಯಾಗಿತ್ತು. ಕೊನೆಗೆ ಕ್ಯಾಸಿಯು ನಾಗರಹಾವಿನ ಕುತ್ತಿಗೆಗೆ ಬಾಯಿ ಹಾಕಿ ಕಚ್ಚಿದಾಗ ನರಳಿದ ನಾಗರ, ತನ್ನ ದೇಹವನ್ನು ಶ್ವಾನದ ಕೊರಳಿಗೆ ಸುತ್ತಿ ಬಿಗಿ ಹಿಡಿಯತೊಡಗಿತು. ಆಗ ನಡೆದ ಸಂಘರ್ಷದಲ್ಲಿ ಶ್ವಾನದ ಹಿಡಿತದಿಂದ ಬಿಡಿಸಿಕೊಂಡ ನಾಗರಹಾವು ಕ್ಯಾಸಿಯ ನಾಲಿಗೆ ಹಾಗೂ ಮೂತಿಗೆ ಕಚ್ಚತೊಡಗಿತು.
ಇದರಿಂದ ಕೆರಳಿದ ಶ್ವಾನವು ನಾಗರ ಹಾವಿನ ಕುತ್ತಿಗೆ ಸೀಳಿ ಕೊಂದು ಹಾಕಿತು. ಆದರೆ, ವಿಧಿಲೀಲೆ ಬೇರೆಯೇ ಆಗಿತ್ತು. ಹಾವಿನ ವಿಷ ವರ್ತುಲಕ್ಕೆ ಸಿಕ್ಕಿದ ಶ್ವಾನ ಅಸ್ವಸ್ಥಗೊಂಡು ಬಿದ್ದು ಒದ್ದಾಡತೊಡಗಿತು. ಅದರ ಕೊರಳಿಗೆ ಸುತ್ತಿಕೊಂಡಿದ್ದ ಹಾವಿನ ಮೃತದೇಹವನ್ನು ಬಿಡಿಸಿ ತಕ್ಷಣ ಆಸ್ಪತ್ರೆಗೆ ಕೊಂಡೊಯ್ದರೂ ಮಾರ್ಗಮಧ್ಯೆ ಅಸುನೀಗಿತು.
ಇದನ್ನೂ ಓದಿ: ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ: ಬಾವನ ಮೇಲಿನ ಸೇಡಿಗೆ ಕೃತ್ಯ ಎಸಗಿದ್ದ ಆರೋಪಿ ಬಂಧನ
ಕೋಲಾರ ಸಮೀಪದ ಬೀರಂಡಹಳ್ಳಿಯ ಬಿಎಂಟಿಸಿ ನೌಕರ ವೆಂಕಟೇಶ್ ಅವರ ತೋಟದ ಮನೆಯಲ್ಲಿ ಈ ದುರ್ಘಟನೆ ಜರುಗಿದೆ. ಮನೆ ಸದಸ್ಯನನ್ನೇ ಕಳೆದುಕೊಂಡ ದು:ಖದಲ್ಲಿ ಕುಟುಂಬ ಕಣ್ಣೀರು ಹಾಕುತ್ತಿದೆ. ನೋವಿನಲ್ಲೇ ತನ್ನ ಮುದ್ದಿನ ಕ್ಯಾಸಿಯ ಮೃತದೇಹವನ್ನು ಮನೆಯಂಗಳದ ಬದಿಯಲ್ಲಿ ಅಂತ್ಯಕ್ರಿಯೆ ಮಾಡಿ ಪೂಜಿಸಲಾಯಿತು. ಮನೆಯಂಗಳದಲ್ಲಿ ಅಡಗಿದ್ದ ನಾಗರ ಹಾವನ್ನು ಕೊಲ್ಲುವ ಮೂಲಕ ಮನೆಯವರ ಪ್ರಾಣ ರಕ್ಷಣೆ ಮಾಡಿದ ಕ್ಯಾಸಿ ಪ್ರಾಣಾರ್ಪಣೆಯನ್ನು ಸ್ಥಳೀಯರು ಕೊಂಡಾಡುತ್ತಿದ್ದಾರೆ.