ಕೋಲಾರ: ಖಾತೆ ಬದಲಾವಣೆಗಾಗಿ ತಾಲೂಕು ಕಚೇರಿಗೆ ಅಲೆದು ಸುಸ್ತಾದ ಅಜ್ಜಿಯೊಬ್ಬರು, ತಹಶೀಲ್ದಾರ್ ಕಚೇರಿ ಬಾಗಿಲಲ್ಲಿ ಮಲಗಿ ಪ್ರತಿಭಟನೆ ನಡೆಸಿದ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಕಚೇರಿಯಲ್ಲಿ ನಡೆದಿದೆ. ಖಾತೆ ಬದಲಾವಣೆ ಮಾಡಿಕೊಡಲು ಅಧಿಕಾರಿಗಳು ಅನಗತ್ಯ ವಿಳಂಬ ಮಾಡಿದ ಹಿನ್ನೆಲೆ ಅಜ್ಜಿ ಈ ರೀತಿ ಪ್ರತಿಭಟಿಸಿದ್ದಾರೆ.
ಶ್ರೀನಿವಾಸಪುರ ತಾಲೂಕಿನ ಹೊದಲಿ ಗ್ರಾಮದ ನರಸಮ್ಮ ತಾಲೂಕು ಕಚೇರಿಯಲ್ಲಿ ಬಂದು ಮಲಗಿರುವ ಅಜ್ಜಿಯಾಗಿದ್ದಾರೆ. ತಹಶೀಲ್ದಾರ್ ಶರೀನ್ ತಾಜ್, ಅಜ್ಜಿ ಹಾಗೂ ಅವರ ಸಂಬಂಧಿಕರ ಮನವೊಲಿಸಿದರೂ ಪ್ರಯೋಜನವಾಗಿಲ್ಲ. ಇಂದು ತಾಲೂಕು ಕಚೇರಿಗೆ ಭೇಟಿ ನೀಡಿ, ಕೋಲಾರ ಉಪ ವಿಭಾಗಾಧಿಕಾರಿ ಆನಂದ್ ಪ್ರಕಾಶ್ ಮೀನಾಗೆ ಮನವಿ ಪತ್ರ ನೀಡಿದ್ದಾರೆ. ಅಲ್ಲದೇ ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಒಂದು ತಿಂಗಳ ಕಾಲಾವಕಾಶ ಪಡೆದ ಹಿನ್ನೆಲೆ ಪ್ರತಿಭಟನೆ ಕೈಬಿಟ್ಟು ವಾಪಸ್ ಆಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಇದು ಎರಡನೇ ಘಟನೆಯಾಗಿದ್ದು, ಇತ್ತೀಚೆಗಷ್ಟೇ ಕೋಲಾರ ತಾಲೂಕು ಕಚೇರಿಯಲ್ಲಿ ಕೆಲಸ ವಿಳಂಬ ಮಾಡಿದ್ದನ್ನು ಖಂಡಿಸಿ, ಕಚೇರಿಯಲ್ಲೇ ಡಿಸೇಲ್ ಸುರಿದುಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದ. ಈ ಬೆನ್ನಲ್ಲೇ ಇಂದು ಅಜ್ಜಿಯೊಬ್ಬರು ವಿನೂತನವಾಗಿ ಪ್ರತಿಭಟನೆ ಮಾಡಿ, ತಾಲೂಕು ಕಚೇರಿ ಕಾರ್ಯವೈಖರಿ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಆ ಶಿಕ್ಷಕ ನಮ್ಮನ್ನು ನೋಡಬಾರದ ರೀತಿಯಲ್ಲಿ ನೋಡ್ತಾನೆ: ಶಿಕ್ಷಕಿಯರ ಗಂಭೀರ ಆರೋಪ