ಕೋಲಾರ: ಬಯಲು ಸೀಮೆ ಜಿಲ್ಲೆ ರೈತರ ಆದಾಯದ ಬೆಳೆ ಟೋಮ್ಯಾಟೊಗೆ ಕಳೆದ 15 ದಿನಗಳಿಂದ ಬೆಂಬಿಡದೆ ಸುರಿದ ಮಳೆರಾಯ ಸಂಕಷ್ಟ ತಂದೊಡ್ಡಿದ್ದಾನೆ.
ಜಿಲ್ಲೆಯಲ್ಲಿ ಈ ಬೆಳೆಯಿಂದಲೇ ಸಾವಿರಾರು ರೈತರು ತಮ್ಮ ವರ್ಷದ ಬದುಕನ್ನು ನಡೆಸುತ್ತಾ ಬಂದಿದ್ದಾರೆ. ನದಿ ನಾಲೆಗಳಿಲ್ಲದ ಜಿಲ್ಲೆಯಲ್ಲಿ ನೀರು ಪಾತಾಳ ಸೇರಿದರೂ, ಬೆವರು ಹರಿಸಿ ಬೆಳೆ ಬೆಳೆಯುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ಟೋಮ್ಯಾಟೊಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಇದೆ. 15 ಕೆಜಿ ಬಾಕ್ಸ್ ಟೋಮ್ಯಾಟೊ 400-500 ರೂ. ಇದೆ.
ಇಂಥ ಸಂದರ್ಭದಲ್ಲಿ ಟೋಮ್ಯಾಟೊ ಬೆಳೆಗೆ ಅಂಗಮಾರಿ ಅಥವಾ ಚುಕ್ಕೆ ರೋಗ ತಗುಲಿದೆ. ಪರಿಣಾಮ ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದ ಬೆಳೆ ನೀರಿನಲ್ಲಿ ಹೋಮ ಮಾಡಿದಂತಾಗಿದೆ.
ಮಹಾರಾಷ್ಟ್ರ, ಆಂಧ್ರ, ತಮಿಳುನಾಡು ಸೇರಿ ಹೊರ ರಾಜ್ಯಗಳಲ್ಲಿ ಮಳೆಯ ಪರಿಣಾಮ ಬೆಳೆಹಾನಿಯಾಗಿದ್ದು, ಕೋಲಾರ ಜಿಲ್ಲೆಯ ಟೋಮ್ಯಾಟೊಗೆ ಭರ್ಜರಿ ಬೇಡಿಕೆ ಇದೆ. 15 ದಿನಗಳಿಂದ ಸುರಿದ ಭಾರಿ ಮಳೆಗೆ ಬೆಳೆಗೆ ಅಂಗಮಾರಿ ಅಥವಾ ಚುಕ್ಕೆ ರೋಗ ಬಾಧಿಸುತ್ತಿದೆ.