ಕೋಲಾರ : ಸರ್ಕಾರಿ ಗೋಮಾಳ ಒತ್ತುವರಿ ಮಾಡಿದ ಹಿನ್ನೆಲೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ, ಇಬ್ಬರು ಪಿಡಿಒ ಸೇರಿ 5 ಜನರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ತಾಲೂಕಿನ ಅರಾಭಿಕೊತ್ತನೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಕೆಂಚೇಗೌಡ ಎಂಬುವರು ಅಧಿಕಾರ ದುರುಪಯೋಗಿಸಿಕೊಂಡು ಸಂಬಂಧಿಕರ ಹೆಸರಿಗೆ ಅಕ್ರಮವಾಗಿ ಖಾತೆ ಮಾಡಿಸಿಕೊಂಡಿರುವುದು ತನಿಖೆಯಿಂದ ಸಾಬೀತಾಗಿದೆ. ಹಾಗಾಗಿ, ಪಂಚಾಯತ್ ಮಾಜಿ ಸದಸ್ಯ ಕೆಂಚೇಗೌಡ, ಸಂಬಂಧಿಗಳಾದ ನಾರಾಯಣ ಸ್ವಾಮಿ, ಕೃಷ್ಣಮೂರ್ತಿ, ಪಿಡಿಒಗಳಾದ ದಿವಂಗತ ಸತೀಶ್ ಕುಮಾರ್, ಕಮಲಾ ವಿರುದ್ಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋಮಾಳ ಜಮೀನು ನಿವೇಶನವಾಗಿ ಮಾರ್ಪಾಡು ಮಾಡಿದ ಹಿನ್ನೆಲೆ ಈ ಹಿಂದೆ ರದ್ದು ಪಡಿಸಿ ಹಿಂದಿನ ಸಿಇಒ ಆದೇಶ ಹೊರಡಿಸಿದ್ದರು. ತನಿಖೆ ನಡೆಸಿದ ಅಧಿಕಾರಿಗಳು ತಾಲೂಕು ಪಂಚಾಯತ್ ಇಒ ಎನ್ ವಿ ಬಾಬು ಅವರು ನೀಡಿದ ದೂರಿನ ಆಧಾರದ ಮೇಲೆ 5 ಜನರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ಸಾರ್ವಜನಿಕ ಆಸ್ತಿನಾಶ, ಗ್ರಾಮ ಪಂಚಾಯತ್‌ಗೆ ನಷ್ಟ ಉಂಟು ಮಾಡಿದ ಕಾರಣ, ವಂಚನೆ ಹಾಗೂ ನಕಲಿ ದಾಖಲೆ ಪತ್ರ ಸೃಷ್ಟಿಸಿದ ಹಿನ್ನೆಲೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬಂಧಿಸುವ ಸಾಧ್ಯತೆ ಇದೆ.