ಕೋಲಾರ: ಕೊರೊನಾ ಸೋಂಕು ಸೋಕದ ಗ್ರೀನ್ ಝೋನ್ನಲ್ಲಿದ್ದ ಕೋಲಾರ ಜಿಲ್ಲೆಯು, ಲಾಕ್‍ಡೌನ್ ಸಡಿಲಿಕೆ ನಂತರ ರೆಡ್ ಝೋನ್ ಆಗಿ ಪರಿವರ್ತನೆಗೊಂಡಿತು. ಈಗ ಪ್ರಕರಣಗಳ ಸಂಖ್ಯೆ ನಾಲ್ಕು ಸಾವಿರ ಗಡಿ ದಾಟಿದ್ದು, ಸೋಂಕು ತಡೆಗಟ್ಟಲು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ. ಹೀಗಾಗಿ, ಆಸ್ಪತ್ರೆಗಳಲ್ಲಿ ಸೋಂಕಿತರು ಮತ್ತು ವೈದ್ಯರಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಲಾಗ್ತಿದೆ.
ಪ್ರತ್ಯೇಕ ವಾರ್ಡ್‍ಗಳನ್ನು ನಿರ್ಮಿಸಿ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವುದಲ್ಲದೆ, ಬಳಸಿದ ವಸ್ತುಗಳನ್ನು ಜಾಗೃತವಾಗಿ ವಿಲೇವಾರಿ ಮಾಡುತ್ತಿವೆ. ನಿರ್ಲಕ್ಷ್ಯ ಮಾಡಿದರೆ ಸಾರ್ವಜನಿಕರಿಗೆ ಸೋಂಕು ತಗುಲುವ ಅಪಾಯವಿದೆ. ಹೀಗಾಗಿ, ರೋಗಿಗಳು ಉಪಯೋಗಿಸಿ ಬಿಸಾಡುವ ಬೆಡ್‍ಶೀಟ್ ಹಾಗೂ ತಲೆದಿಂಬುಗಳ ಕವರ್ಗಳನ್ನು ನಿತ್ಯ ಬದಲಾಯಿಸಲಾಗುತ್ತಿದೆ. ಹಾಗೆಯೇ ವೈದ್ಯರು ಬಳಸಿದ ಪಿಪಿಇ ಕಿಟ್ಗಳನ್ನು ಸಹ ಅದೇ ರೀತಿ ಮಾಡಲಾಗುತ್ತದೆ.
ಇನ್ನು ಹಳದಿ ಹಾಗೂ ಕೆಂಪು ಬಿನ್ಗಳಿಗೆ ಶೇ.1ರಷ್ಟು ಫ್ಲೋರೈಡ್ ದ್ರಾವಣವನ್ನು ಸಿಂಪಡಿಸಿ ಸ್ವಚ್ಛಗೊಳಿಸಿ ಶೇಖರಣೆ ಮಾಡಲಾಗುತ್ತದೆ. ಇದಾದ ಬಳಿಕ ದೊಡ್ಡ ಗಾತ್ರದ ಸ್ಟೀಲ್ ಬಾಕ್ಸ್ಗಳಲ್ಲಿ ತ್ಯಾಜ್ಯವನ್ನು ತುಂಬಲಾಗುತ್ತದೆ. ಅದನ್ನು ದಿನಾ ಸಂಜೆ ಮೀರಾ ಇನ್ವಿರೋಟೆಕ್ ಏಜೆನ್ಸಿಯು ಕೋಲಾರದ ಹಾಲೇರಿ ಬಳಿ ಸರ್ಕಾರದ ಪ್ರೊಟೋಕಾಲ್ ಮೂಲಕ ತ್ಯಾಜ್ಯ ಸುಡುವುದರ ಮೂಲಕ ವಿಲೇವಾರಿ ಮಾಡಲಾಗುತ್ತಿದೆ.
ಹೋಮ್ ಕ್ವಾರಂಟೈನ್ನಲ್ಲಿರುವ ಸೋಂಕಿತರಲ್ಲೂ ಜಾಗೃತಿ ಮೂಡಿಸಿದ್ದು, ಅಲ್ಲಿಯೂ ಪ್ರತ್ಯೇಕ ಬಾಕ್ಸ್ಗಳಲ್ಲಿ ತ್ಯಾಜ್ಯವನ್ನು ವಿಂಗಡಣೆ ಮಾಡಲಾಗುತ್ತಿದೆ. ಇನ್ನು ಸೋಂಕಿತರ ವಾರ್ಡ್‍ಗಳಲ್ಲಿ ಮೂಲ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿವೆ ಎಂಬ ಆರೋಪಗಳು ಗಟ್ಟಿಯಾಗಿ ಕೇಳಿಬರುತ್ತಿವೆ. ಕುಡಿಯುವ ನೀರು ಸೇರಿದಂತೆ ಸರಿಯಾದ ಸಮಯಕ್ಕೆ ಊಟ ನೀಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆನ್ನಲಾಗಿದೆ.