ಕೋಲಾರ : ಇನ್ಮುಂದೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಕೋವಿಡ್ ಸೆಂಟರ್ ತೆರೆಯಲಾಗುವುದು. ಅಲ್ಲದೆ ಪಂಚಾಯತ್ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ರಚನೆ ಮಾಡಿ, ಹೋಮ್ ಐಸೋಲೇಷನ್ನಲ್ಲಿರುವಂತಹ ಸೋಂಕಿತರೊಂದಿಗೆ ಪ್ರತಿನಿತ್ಯ ದೂರವಾಣಿಯೊಂದಿಗೆ ಮಾತನಾಡಿ, ಅವರ ಸಮಸ್ಯೆಗಳಿಗೆ ಸ್ಪಂದಿಸುವಂತಹ ಕೆಲಸ ಆಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.
ಆಯ್ದ ಜಿಲ್ಲೆಗಳ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಪಿಎಂ ಕಾನ್ಫರೆನ್ಸ್ನಲ್ಲಿ ಭಾಗಿಯಾದ ನಂತರ ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ಮಾತನಾಡಿದರು.
ಕೋವಿಡ್ ಸೆಂಟರ್‌ಗಳನ್ನ ಹೆಚ್ಚಿಸುವ ಸಲುವಾಗಿ ದಾನಿಗಳಿಗೆ ಸರ್ಕಾರ ಅವಕಾಶವನ್ನ ನೀಡಿದೆ. ಅಲ್ಲದೇ, ಜಿಲ್ಲೆಯಲ್ಲಿ ಕೊರೊನಾ ಪರೀಕ್ಷೆಗಳ ಸಂಖ್ಯೆಯನ್ನ ಹೆಚ್ಚಿಸಲಿದ್ದು, ಪ್ರತಿ ದಿನ ಜಿಲ್ಲೆಯಲ್ಲಿ ನಾಲ್ಕು ಸಾವಿರ ಟೆಸ್ಟ್ಗಳನ್ನ ಮಾಡುವ ಚಿಂತನೆ ನಡೆಸುವುದಾಗಿ ಹೇಳಿದರು.
ಕೊರೊನಾ ಹೆಚ್ಚಾಗುತ್ತಿರುವ ಕೋಲಾರ ಸೇರಿದಂತೆ ಮಾಲೂರು, ಕೆಜಿಎಫ್ನಲ್ಲಿ ಕಠಿಣ ರೂಲ್ಸ್ ಜಾರಿ ಮಾಡುವ ಸಲುವಾಗಿ ನಾಳೆ ಸಂಜೆಯೊಳಗೆ ಅಂತಿಮ ರೂಪುರೇಷೆಗಳನ್ನ ಸಿದ್ಧತೆ ಮಾಡಿಕೊಳ್ಳುವುದಾಗಿ ತಿಳಿಸಿದ ಅವರು, ಜಿಲ್ಲೆಯಲ್ಲೂ ಸಹ ಬ್ಲಾಕ್ ಫಂಗಸ್ ರೋಗ ಕಂಡು ಬಂದಿದ್ದು, ಮುಂಜಾಗ್ರತೆಯಾಗಿ ಕೋಲಾರದ ಜಾಲಪ್ಪ ಆಸ್ಪತ್ರೆಯಲ್ಲಿ 30 ಬೆಡ್‌ಗಳುಳ್ಳ ವಾರ್ಡ್‌ಗಳನ್ನ ಬ್ಲಾಕ್ ಫಂಗಸ್ ರೋಗಿಗಳಿಗಾಗಿ ಮಾಡಿದ್ದೇವೆ ಎಂದರು.
ಅಗ್ರೆಸಿವ್ ಆಗಿ ಟೆಸ್ಟಿಂಗ್ಸ್ ಮಾಡಬೇಕು : ಜಿಲ್ಲಾಧಿಕಾರಿ ಡಾ. ಆರ್ ಸೆಲ್ವಮಣಿ ಮಾತನಾಡಿ, ವಿಸಿಯಲ್ಲಿ ಪ್ರಧಾನಿ ಮೋದಿ ಎಲ್ಲಾ ಡಿಸಿಗಳಿಗೂ ಅಗ್ರೆಸಿವ್ ಆಗಿ ಟೆಸ್ಟಿಂಗ್ಸ್ ಮಾಡಬೇಕು, ಕಂಟೇನ್ಮೆಂಟ್ ಝೋನ್‌ಗಳನ್ನು ಹೆಚ್ಚಿಸಿ ಕೊರೊನಾ ನಿಯಂತ್ರಿಸುವಲ್ಲಿ ಹುಮ್ಮಸ್ಸಿನಿಂದ ಕೆಲಸ ಮಾಡಬೇಕು. ಹಾಗೆಯೇ, ವೇಸ್ಟೇಜ್ ಆಗ್ತಿರುವ ವ್ಯಾಕ್ಸಿನ್ ಬಗ್ಗೆ ಗಮನ ಹರಿಸಬೇಕೆಂದು ಸೂಚಿಸಿದ್ದಾರೆ ಎಂದರು.
ವ್ಯಾಕ್ಸಿನ್ ಅಮೂಲ್ಯವಾಗಿರೋದ್ರಿಂದ ಜೀರೋ ವೇಸ್ಟೇಜ್ ಮಾಡಿ, ಪ್ರತಿಯೊಬ್ಬರಿಗೂ ಹಾಕಬೇಕು ಎಂದಿರುವ ಅವರು, ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್ ತಯಾರಿಕಾ ಘಟಕ ಸ್ಥಾಪಿಸುವ ಭರವಸೆ ನೀಡಿದ್ದಾರೆ. ಅಲ್ಲದೇ, ಗ್ರಾಮ ಪಂಚಾಯತ್ ಹಂತದಲ್ಲಿ ಕೋವಿಡ್ ಸೆಂಟರ್ ತೆರೆದು ಪಾಸಿಟಿವ್ ಬಂದಿರುವವರನ್ನು ಆರೈಕೆ ಮಾಡುವಂತೆ ಸೂಚನೆ ನೀಡಿದ್ದಾರೆ ಎಂದರು.
ಗ್ರಾಮಗಳನ್ನು ಕೊರೊನಾ ಮುಕ್ತ ಮಾಡುವಲ್ಲಿ ಶ್ರಮ ವಹಿಸಿದರೆ ಅದು ದೇಶದ ಗೆಲುವು. ಅವಶ್ಯಕತೆಗೂ 15 ದಿನಗಳ ಮುಂಚೆಯೇ ವ್ಯಾಕ್ಸಿನ್ ಸಪ್ಲೈ ಮಾಡುತ್ತೇವೆ. ಭಯ ಬೇಡ ಆತ್ಮಸ್ಥೈರ್ಯದೊಂದಿಗೆ ಕೆಲಸ ಮಾಡಿ ಎಂದು ಪ್ರಧಾನಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಓದಿ: ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ನ ಶಶಾಂಕ್ ಏಕಬೋಟೆ ಕೋವಿಡ್ಗೆ ಬಲಿ