ಕೋಲಾರ: ವ್ಯಕ್ತಿಯೊಬ್ಬ ಅರೆನಗ್ನ ಸ್ಥಿತಿಯಲ್ಲಿ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದ್ದು, ವ್ಯಕ್ತಿಯ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ.
ನಗರದ ಮಾರುತಿ ವೀರಾಂಜನೇಯ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ಮಂಜುನಾಥ್ ಅಲಿಯಾಸ್ ಸ್ಟಾಲಿನ್ ಮಂಜು ಎಂಬಾತ ಮನೆಯ ಮುಂದೆ ಶವವಾಗಿ ಪತ್ತೆಯಾಗಿದ್ದಾನೆ. ಈತ ಕೊಳಚೆ ನಿರ್ಮೂಲನಾ ಮಂಡಳಿಯಿಂದ ನಿರಾಶ್ರಿತರಿಗೆ ನೀಡಲಾಗಿದ್ದ ಮನೆಯಲ್ಲಿ ಒಂಟಿಯಾಗಿ ವಾಸವಿದ್ದ. ರಾತ್ರಿ 11 ಗಂಟೆಯವರೆಗೂ ಬಡವಾಣೆಯ ಜನರ ಜೊತೆ ಮಾತನಾಡಿಸಿಕೊಂಡಿದ್ದ. ಆದರೆ, ಬೆಳಗ್ಗೆ ಮನೆಯ ಕಾರಿಡಾರ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಈತನ ಬಾಮೈದ, ಕಳೆದ ರಾತ್ರಿ ಮಂಜುನಾಥನಿಗೆ ಕರೆ ಮಾಡಿದ್ದ ವೇಳೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಮಹಿಳೆಯೊಬ್ಬಳ ವಿಚಾರಕ್ಕೆ ಗಲಾಟೆಯಾಗಿ ಮಾರಾಮಾರಿ ನಡೆದಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಅಲ್ಲದೇ ಮಂಜುನಾಥನ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಮಂಜುನಾಥ ಕಂಡಾಗಲೆಲ್ಲ ಗುಟುರು ಹಾಕುತ್ತಿದ್ರು ಎನ್ನಲಾಗಿದೆ. ಶವದ ಮೇಲೆ ಯಾವುದೇ ರಕ್ತದ ಕಲೆಗಳು ಸಹ ಪತ್ತೆಯಾಗಿಲ್ಲ. ಘಟನೆ ಸಂಬಂಧ ಗಲ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ತನಿಖೆ ಮುಂದುವರೆದಿದೆ.