ಕೋಲಾರ: ಅಂತರಗಂಗೆ ಬೆಟ್ಟದ ತಪ್ಪಲಿನಲ್ಲಿರುವ ಕೀಲುಕೋಟೆಯ ಅಂತರಗಂಗೆ ಪುನರ್ವಸತಿ ಕೇಂದ್ರವು, ಅನಾಥ ಹಾಗೂ ಬುದ್ಧಿಮಾಂದ್ಯ ಮಕ್ಕಳು ಹಾಗೂ ವೃದ್ಧರಿಗೆ ಆಶ್ರಯ ತಾಣ. ಕಳೆದ ಎರಡುವರೆ ದಶಕಗಳಿಂದ ಕಾರ್ಯ ನಿರ್ವಹಿಸುತ್ತಿರುವ ಈ ಸಂಸ್ಥೆಯಲ್ಲಿ ಸುಮಾರು 80 ಅಧಿಕ ಮಕ್ಕಳು ಬುದ್ಧಿಮಾಂದ್ಯ, ವಿಶೇಷ ಚೇತನ ಮಕ್ಕಳು ಹಾಗೂ ವೃದ್ಧರು ಆಶ್ರಯ ಪಡೆಯುತ್ತಿದ್ದಾರೆ.
ದಾನಿಗಳ ನೆರವಿನಿಂದ ನಡೆಯುತ್ತಿರುವ ಈ ವಸತಿ ಶಾಲೆಗೆ ದಾನಿಗಳೇ ಆಸರೆ ಹಾಗೂ ಆಶ್ರಯ. ಹೀಗಿರುವಾಗ ಲಾಕ್ಡೌನ್ ಆಗಿ ಇಲ್ಲಿಗೆ ಬರುವ ದಾನಿಗಳ ಸಂಖ್ಯೆ ಕಡಿಮೆಯಾಗಿದ್ದು, ಇಲ್ಲಿನ ಮಕ್ಕಳ ಹಾಗೂ ವೃದ್ಧರ ಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ. ಇಲ್ಲಿಗೆ ರಾಜ್ಯದ ನಾನಾ ಕಡೆಗಳಿಂದ ದಾನಿಗಳು ಬಂದು ಸಹಾಯ ಮಾಡುತ್ತಿದ್ರು. ಗಣ್ಯರು ಹಾಗೂ ನಟರು ಹುಟ್ಟು ಹಬ್ಬದಂತಹ ಕಾರ್ಯಕ್ರಮಗಳನ್ನು ಮಾಡಿ ಅನ್ನದಾನ ಹಾಗೂ ಬಟ್ಟೆಗಳನ್ನು ಮಕ್ಕಳಿಗೆ ನೀಡುತ್ತಿದ್ರು. ಆದರೆ ಲಾಕ್ಡೌನ್ ಆದಾಗಿನಿಂದ ಇಲ್ಲಿಗೆ ಯಾವುದೇ ದಾನಿಗಳು ಬಂದಿಲ್ಲ. ಹಾಗೂ ಯಾವುದೇ ಸಮಾರಂಭಗಳು ನಡೆದಿಲ್ಲ.
ಪ್ರತಿನಿತ್ಯ ಮಕ್ಕಳ ಪೋಷಣೆ ಹಾಗೂ ಸೇವಾ ಕಾರ್ಯಕ್ಕೆ ಸಾವಿರಾರು ರೂಪಾಯಿ ಖರ್ಚಾಗುತ್ತೆ. ದಾನಿಗಳು ಕೊಟ್ಟ ಅಲ್ಪ ಪ್ರಮಾಣದ ಸಹಾಯದಿಂದ ನಡೆಯುತ್ತಿದ್ದ ಆಶ್ರಮಕ್ಕೆ ಇಂದು ದಿಕ್ಕು ತೋಚದಂತಾಗಿದೆ. ಕಳೆದ 20 ದಿನಗಳಿಂದ ಈ ಸಂಸ್ಥೆ ಸಂಕಷ್ಟದ ದಿನಗಳಲ್ಲಿ ಕಾಲ ದೂಡುತ್ತಿದ್ದು, ಇಲ್ಲಿನ ಮಕ್ಕಳು, ವೃದ್ಧರು ಹಾಗೂ ಸಂಸ್ಥೆಯ ಸಿಬ್ಬಂದಿ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.