ಕೋಲಾರ : ಕಾಂಗ್ರೆಸ್ ದೊಡ್ಡ ಪಕ್ಷ, ಭಿನ್ನಾಭಿಪ್ರಾಯಗಳು ಸರ್ವೇ ಸಾಮಾನ್ಯ ಇವೆಲ್ಲಾ ಚುನಾವಣೆ ವೇಳೆಗೆ ಸರಿ ಹೋಗಲಿದೆ ಎಂದು ಸಂಸದ ಕೆ.ಹೆಚ್.ಮುನಿಯಪ್ಪ ಹೇಳಿದರು.
ನಗರದ ಹೊರವಲಯದಲ್ಲಿರುವ ನಂದಿನಿ ಪ್ಯಾಲೇಸ್‍ನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ನಾಲ್ಕೈದು ದಿನಗಳಿಂದ ದೆಹಲಿಯಲ್ಲಿ ಸಾಕಷ್ಟು ವಿದ್ಯಮಾನಗಳು ನಡೆದಿದ್ದು, ಇವೆಲ್ಲವನ್ನು ಹೈಕಮಾಂಡ್ ನಿವಾರಣೆ ಮಾಡಲಿದ್ದಾರೆ. ಟಿಕೆಟ್ ನನಗೆ ಸಿಗುವುದು ಖಚಿತ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಹೈ ಕಮಾಂಡ್ ಟಿಕೆಟ್ ನೀಡಿದ ನಂತರ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು.
ಚುನಾವಣೆ ಸಂದರ್ಭದಲ್ಲಿ ಗುಂಪುಗಾರಿಕೆ ಹೊಸದೆನ್ನಲ್ಲ. ಕಳೆದ 2004 ರಿಂದ ಇಂತಹ ಗುಂಪುಗಾರಿಕೆ ನಡೆಯುತ್ತಲೇ ಇದೆ. ಹೈಕಮಾಂಡ್ ಬಳಿ ಹೋಗಿ ಬರುತ್ತಲೆ ಇದ್ದಾರೆ. ಇತ್ತ ನಾನು ಗೆಲ್ಲುತ್ತಲೆ ಇದ್ದೇನೆ. ಇನ್ನು ಕೋಮುವಾದಿ ಪಕ್ಷಗಳನ್ನು ದೊರವಿಡಲು ಎಲ್ಲಾ ಜಾತ್ಯತೀತ ಪಕ್ಷಗಳು ಒಂದಾಗಿ ಕೆಲಸ ಮಾಡಬೇಕಾಗಿದೆ. ಕಾಂಗ್ರೆಸ್ ಪಕ್ಷವನ್ನು ಮುಂಚೂಣಿಯಲ್ಲಿ ತಂದು ರಾಹುಲ್ ಗಾಂಧಿಯನ್ನು ಪ್ರಧಾನಮಂತ್ರಿಯನ್ನಾಗಿ ಮಾಡಬೇಕು ಎಂದರು.
ಭೂ ಹಗರಣ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಚುನಾವಣೆ ಸಂದರ್ಭದಲ್ಲಿ ಭೂ ಹಗರಣ ಆರೋಪಗಳು ಕೇಳಿ ಬರುತ್ತಲೆ ಇದೆ. ಇದೆಲ್ಲಾ ಶುದ್ದ ಸುಳ್ಳು. ಬಿಜೆಪಿಯವರು ಇದರ ಬಗ್ಗೆ ಅಪ ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿಯವರು ಗೆಲುವುದಕ್ಕೆ ಆಗುವುದಿಲ್ಲ. ಆದ್ದರಿಂದ ಈ ರೀತಿ ತೇಜೋವಧೆ ಮಾಡುತ್ತಿದ್ದಾರೆ. ಇನ್ನು ನಾನು ಪ್ರಮಾಣಿಕವಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದು, ಚುನಾವಣೆ ಸಂದರ್ಭದಲ್ಲಿ ನನ್ನ ಮತ್ತು ಕುಟುಂಬದ ಆಸ್ತಿ ವಿವರಣೆಯನ್ನು ಪ್ರಕಟಿಸುವುದಾಗಿ ಹೇಳಿದರು.