ಕೋಲಾರ: ಇಂದು ಜಿಲ್ಲೆಯ ಮಳೆಪೀಡಿತ ಪ್ರದೇಶಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೂಡಲೇ ಪರಿಹಾರ ನೀಡುವ ಭರವಸೆ ನೀಡಿದರು.
ಜಿಲ್ಲೆಯ ವಿವಿಧ ಪ್ರದೇಶದಲ್ಲಿನ ಜಮೀನುಗಳಿಗೆ ಮುಖ್ಯಮಂತ್ರಿಗಳು ತೆರಳುತ್ತಿದ್ದ ವೇಳೆ, ಮಾರ್ಗಮಧ್ಯೆ ರೈತರ ಅಹವಾಲು, ಮನವಿ ಪತ್ರಗಳನ್ನು ಸ್ವೀಕರಿಸಿದರು. ತಾಲೂಕಿನ ಮುದವಾಡಿ ಗ್ರಾಮದ ಕೆರೆಯ ಕೋಡಿ ಹರಿಯುತ್ತಿರುವ ಪ್ರದೇಶವನ್ನು ವೀಕ್ಷಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಮಳೆಯಿಂದ ಜಿಲ್ಲೆಯಲ್ಲಿ 48,439 ಹೆಕ್ಟೇರ್ ಕೃಷಿ ಬೆಳೆಗಳು ಹಾಗೂ 7,000 ಹೆಕ್ಟೇರ್ ತೋಟಗಾರಿಕೆ ಬೆಳೆಗಳು ಹಾಳಾಗಿವೆ. ತೋಟಗಾರಿಕೆ ಬೆಳೆಗಳ ನಷ್ಟದ ಪ್ರಮಾಣ ಸುಮಾರು 36.18 ಕೋಟಿ ರೂ ಎಂದು ಅಂದಾಜಿಸಲಾಗಿದೆ. 50 ಕೋಟಿ ರೂಗೂ ಹೆಚ್ಚಿನ ಕೃಷಿ ಬೆಳೆಗಳ ನಷ್ಟ ಸಂಭವಿಸಿದೆ. ಈಗಾಗಲೇ ಮಳೆಯಿಂದ ಆಗಿರುವ ಬೆಳೆ ನಷ್ಟದ ಸಂಬಂಧ ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಜಿಲ್ಲಾಧಿಕಾರಿಗೆ ವರದಿ ಕೊಟ್ಟಿದ್ದಾರೆ. ಆ ವರದಿಯ ಆಧಾರದ ಮೇಲೆ ಪರಿಹಾರ ನೀಡಲಾಗುತ್ತದೆ ಎಂದರು.
ರಾಜ್ಯದಲ್ಲಿ ಮಳೆಯಿಂದ ಇಷ್ಟೆಲ್ಲ ಅನಾಹುತಗಳಾಗುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರುಗಳು ಜಿಲ್ಲೆಗಳಿಗೆ ಭೇಟಿ ನೀಡುತ್ತಿಲ್ಲ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ಆರೋಪಕ್ಕೆ ಪ್ರತಿಕ್ರಿಯಿಸಿ, ಚುನಾವಣಾ ನೀತಿ ಸಂಹಿತೆ ಇದ್ದರೂ ಕೂಡಾ ಜಿಲ್ಲಾ ಉಸ್ತುವಾರಿ ಸಚಿವರುಗಳು ಜಿಲ್ಲೆಗಳಿಗೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸುತ್ತಿದ್ದಾರೆ. ಆದರೆ ಅದು ಪ್ರಚಾರಕ್ಕೆ ಬಂದಿಲ್ಲ. ನಾವು ಚುನಾವಣಾ ಆಯೋಗಕ್ಕೂ ಮನವಿ ಮಾಡಿದ್ದೇವೆ. ಇಂತಹ ಸಂದರ್ಭದಲ್ಲಿ ಅನುಮತಿ ನೀಡುವಂತೆ ಅಲ್ಲಿಂದ ಅನುಮತಿ ಸಿಕ್ಕ ಕೂಡಲೇ ಉಸ್ತುವಾರಿ ಸಚಿವರುಗಳು ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.
ಮಳೆಗೆ 9 ಮನೆಗಳು ಸಂಪೂರ್ಣವಾಗಿ ಕುಸಿದಿದ್ದು, 658 ಮನೆಗಳು ಭಾಗಶಃ ಹಾನಿಗೊಳಗಾಗಿವೆ. 336 ಶಾಲೆ ಮತ್ತು 504 ಶಾಲಾ ಕೊಠಡಿಗಳಿಗೆ ಹಾನಿಯಾಗಿದೆ. ಈ ಕುರಿತಂತೆ ಸಿಎಂ ಮಾಹಿತಿ ಪಡೆದು ಕೂಡಲೇ ಸರ್ವೆ ಕಾರ್ಯ ಮಾಡಿ ಮಾಹಿತಿ ಅಪ್ಲೋಡ್ ಮಾಡುವಂತೆ ಅಧಿಕಾರಿಗಳಿಗೆ ಆದೇಶಿಸಿದರು. ಈ ವೇಳೆ ಸಿಎಂಗೆ ಸಂಸದ ಮುನಿಸ್ವಾಮಿ, ಶಾಸಕರಾದ ವೈ.ಎ.ನಾರಾಯಣಸ್ವಾಮಿ, ಶ್ರೀನಿವಾಸಗೌಡ ಸಾಥ್ ನೀಡಿದರು.
ಇದನ್ನೂ ಓದಿ: ಪರಿಷತ್ ಚುನಾವಣೆ: ಕೊನೆಗೂ ಕಾಂಗ್ರೆಸ್ನಿಂದ 17 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ