ಕೋಲಾರ: ಸರ್ಕಾರದ ಚಿಹ್ನೆ ಹಾಗೂ ವೆಬ್ಸೈಟ್ ಬಳಸಿ ನಕಲಿ ಗುರುತಿನ ಚೀಟಿ ನೀಡಿ, ರೈತರನ್ನು ವಂಚಿಸುತ್ತಿರುವ ಜಾಲ ಕೋಲಾರದ ಶ್ರೀನಿವಾಸಪುರದಲ್ಲಿ ಪತ್ತೆಯಾಗಿದೆ.
ಇಂಟರ್ನೆಟ್ ಸೆಂಟರ್ಗಳಲ್ಲಿ ಎಫ್‌ಐಡಿ (ಫಾರ್ಮಸ್ ಐಡೆಂಟಿಫಿಕೇಶನ್ ನಂಬರ್) ಗುರುತಿನ ನಂಬರ್‌ಗಳನ್ನು ನೀಡಲಾಗುತ್ತಿದೆ. ಇದನ್ನು ಸರ್ಕಾರ ನೀಡಬೇಕು. ಬದಲಿಗೆ ಖಾಸಗಿಯವರು ನಕಲಿ ಚೀಟಿಗಳನ್ನು ನೀಡುತ್ತಿದ್ದಾರೆ ಎಂದು ರೈತರು ಆರೋಪಿಸಿದರು.
ಸಂವಹನದ ಕೊಂಡಿ: ಎಫ್ಐಡಿಯಿಂದ ನೆರೆ ನಷ್ಟ, ಬೆಳೆ ಪರಿಹಾರ ಸಂಭವಿಸಿದಾಗ ಸರ್ಕಾರ ಹಾಗೂ ರೈತರ ನಡುವಿನ ಸಂವಹನಕ್ಕೆ ಕೃಷಿ ಕಚೇರಿಯಲ್ಲಿ ಈ ನಂಬರ್ ಬಳಕೆಯಾಗುತ್ತದೆ. ಸರ್ಕಾರದ ಯೋಜನೆಗಳನ್ನು ರೈತರಿಗೆ ನೇರವಾಗಿ ತಲುಪಿಸಲು ನೆರವಾಗುವ ನಂಬರ್ ಇದಾಗಿದೆ.
ಇದನ್ನು ಬಂಡವಾಳ ಮಾಡಿಕೊಂಡಿರುವ ಕೆಲವರು ಎನ್‌ಜಿಒಗಳ ಹೆಸರಲ್ಲಿ ಮತ್ತು ಕೆಲ ಡಿಟಿಪಿ ಸೆಂಟರ್‌ಗಳು ಹಣ ಮಾಡಲು ಇಳಿದಿವೆ. ಕೃಷಿ ಇಲಾಖೆ ಚಿಹ್ನೆ ಹಾಗೂ ವೆಬ್ ಸೈಟ್ ದುರುಪಯೋಗ ಪಡಿಸಿಕೊಂಡು ಎಫ್‌ಐಡಿ ಗುರುತಿನ ಚೀಟಿಯನ್ನು ಮಾಡಿಕೊಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಇಂತಹ ನಕಲಿ ಗುರುತಿನ ಚೀಟಿಗಳನ್ನು ಮಾಡಿಕೊಡಲು 200ರಿಂದ 300 ರೂಪಾಯಿವರೆಗೆ ಹಣ ಪಡೆಯಲಾಗುತ್ತಿದೆ. ಹೀಗೆ ಸಾವಿರಾರು ನಕಲಿ ಐಡಿ ಕಾರ್ಡ್‌ಗಳನ್ನು ಈಗಾಗಲೇ ನೀಡಲಾಗಿದೆ ಎಂಬುದು ರೈತರ ಆರೋಪವಾಗಿದೆ.
ರಸಗೊಬ್ಬರ, ಬಿತ್ತನೆ ಬೀಜ ನೀಡಲು ಇದು ನೆರವಾಗುತ್ತಿದ್ದು, ರೈತರಿಗೆ ಇದು ಮುಖ್ಯವಾಗಿ ಬೇಕಾಗುತ್ತದೆ. ಗುರುತಿನ ಚೀಟಿ ಬದಲಾಗಿ ನಂಬರ್ ಬಳಸುತ್ತಾರೆ. ಈಗಾಗಲೇ ಲಕ್ಷಾಂತರ ರೂಪಾಯಿ ದೋಚಿದ್ದು, ಪೊಲೀಸರು ಕೂಡಲೇ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಸದ್ಯ ಈ ವಂಚನೆ ಕೃಷಿ ಇಲಾಖೆ ಗಮನಕ್ಕೆ ಬಂದಿದ್ದು, ಇಲಾಖೆ ಜಂಟಿ ನಿರ್ದೇಶಕಿ ರೂಪಾದೇವಿ ಆದೇಶದಂತೆ ಶ್ರೀನಿವಾಸಪುರದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಧನಂಜಯ್ ಅವರು ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರೈತರಿಗೆ ಅತಿವೃಷ್ಟಿ, ಅನಾವೃಷ್ಟಿ, ಮಾರುಕಟ್ಟೆ ಕುಸಿತ ಜೊತೆಗೆ ವಂಚಕರ ಹಾವಳಿ ಕೂಡ ಹೆಚ್ಚಾಗಿದೆ. ನಕಲಿ ಐಡಿ ಕಾರ್ಡ್ ಹಾಗೂ ನಂಬರ್‌ಗಾಗಿ ನೂರಾರು ರೂಪಾಯಿ ಕೀಳುತ್ತಿರುವ ದಂಧೆಗೆ ಕಡಿವಾಣ ಬೀಳಬೇಕಿದೆ. ಕೃಷಿ ಇಲಾಖೆ ಇನ್ನಷ್ಟು ರೈತರು ಮೋಸ ಹೋಗುವುದನ್ನ ತಪ್ಪಿಸಬೇಕಿದೆ.